ಜೈಪುರ: ಇಬ್ಬರು ಟೀನೇಜ್ ಹುಡುಗರು 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಂದಿರುವ ಘಟನೆ ರಾಜಸ್ಥಾನದ ದೀಗ್ ಜಿಲ್ಲೆಯಲ್ಲಿ ವರದಿಯಾಗಿದೆ. ಸಂತ್ರಸ್ತೆಯ ಕುಟುಂಬ ತಮ್ಮ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಆರೋಪಿಗಳ ವಿರುದ್ಧ ದೂರು ದಾಖಲಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಬಾಲಕಿ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ, ಆಕೆಯ ಕುಟುಂಬ ಧಾರ್ಮಿಕ ಕಾರ್ಯಕ್ರಮಕ್ಕೆ ಹಾಜರಾಗಲು ಹೋಗಿದ್ದಾಗ ಈ ಘಟನೆ ನಡೆದಿದೆ. ಕುಟುಂಬಸ್ಥರು ಮನೆಗೆ ಹಿಂತಿರುಗಿದಾಗ, ಬಾಲಕಿ ಪ್ರಜ್ಞಾಹೀನಳಾಗಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಆಕೆ ಸಾವನ್ನಪ್ಪಿರುವುದಾಗಿ ಘೋಷಿಸಲಾಯಿತು. ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಮರಣೋತ್ತರ ಪರೀಕ್ಷೆಯ ವರದಿಯ ನಂತರ ನಿಖರವಾದ ಕಾರಣ ತಿಳಿದುಬರಲಿದೆ ಎಂದು ಖೋಹ್ ಎಸ್‌ಎಚ್‌ಒ ಮಹೇಂದ್ರ ಶರ್ಮಾ ತಿಳಿಸಿದ್ದಾರೆ.
ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಈ ವಿಷಯದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್‌ಎಚ್‌ಒ ಹೇಳಿದರು.