ಅಮರಾವತಿ: ಹಿಂದಿ ಹೇರಿಕೆಯನ್ನು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ತೀವ್ರವಾಗಿ ವಿರೋಧಿಸುತ್ತಿರುವಾಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಸೋಮವಾರ ಹಿಂದಿ ರಾಷ್ಟ್ರ ಭಾಷೆ ಮತ್ತು ಭಾಷೆ ದ್ವೇಷಿಸುವ ವಿಷಯವಲ್ಲ ಎಂದು ಪ್ರತಿಪಾದಿಸಿದ್ದಾರೆ.
ಇತ್ತೀಚಿಗೆ ಆಂಧ್ರ ಉಪಮುಖ್ಯಮಂತ್ರಿ ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಸಹ ಹಿಂದಿಯನ್ನು ಬೆಂಬಲಿಸಿದ್ದರು ಮತ್ತು ಯಾವುದೇ ಭಾಷೆಯನ್ನು ದ್ವೇಷಿಸುವ ಮನಸ್ಥಿತಿ ಬದಲಾಗಬೇಕು ಎಂದು ಅವರು ಹೇಳಿದ್ದರು.
ಇಂದು ವಿಧಾನಸಭೆಯಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು ಅವರು, "ನಾನು ಇದನ್ನು ನಿಮಗೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಭಾಷೆ ದ್ವೇಷಿಸುವುದಕ್ಕಾಗಿ ಅಲ್ಲ. ಇಲ್ಲಿ(ಆಂಧ್ರಪ್ರದೇಶದಲ್ಲಿ) ಮಾತೃಭಾಷೆ ತೆಲುಗು. ಹಿಂದಿ ರಾಷ್ಟ್ರೀ ಭಾಷೆ ಮತ್ತು ಅಂತರರಾಷ್ಟ್ರೀಯ ಭಾಷೆ ಇಂಗ್ಲಿಷ್" ಎಂದು ಹೇಳಿದರು.
ಜೀವನೋಪಾಯಕ್ಕಾಗಿ ಸಾಧ್ಯವಾದಷ್ಟು ಭಾಷೆಗಳನ್ನು ಕಲಿಯುವುದು ಮುಖ್ಯ ಒತ್ತಿ ಹೇಳಿದ ನಾಯ್ಡು, 'ರಾಷ್ಟ್ರ ಭಾಷೆ' ಕಲಿಯುವುದರಿಂದ ದೆಹಲಿಯಲ್ಲಿ ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಪಾನ್ ಮತ್ತು ಜರ್ಮನಿಯಂತಹ ಇತರ ದೇಶಗಳಿಗೆ ಅನೇಕ ಜನರು ಹೋಗುತ್ತಿರುವುದರಿಂದ, ಆ ಭಾಷೆಗಳನ್ನು ಇಲ್ಲಿಯೂ ಕಲಿಯಲು ಸಾಧ್ಯವಾದರೆ, ಅವರು ವಿದೇಶಿ ತಾಣಗಳಿಗೆ ಭೇಟಿ ನೀಡಿದಾಗ ಮಾತನಾಡಲು ತುಂಬಾ ಸುಲಭವಾಗುತ್ತದೆ ಎಂದು ಹೇಳಿದರು.
ಭಾಷೆ ಸಂವಹನದ ಒಂದು ಸಾಧನ. ಭಾಷೆಯಿಂದ ಜ್ಞಾನವನ್ನು ಪಡೆಯಲು ಸಾಧ್ಯವಿಲ್ಲ. ತಮ್ಮ ಮಾತೃಭಾಷೆಯನ್ನು ಕಲಿತು ಹೆಮ್ಮೆಯಿಂದ ಮಾತನಾಡುವವರು ಪ್ರಪಂಚದಾದ್ಯಂತ ಉನ್ನತ ಸ್ಥಾನಗಳಲ್ಲಿ ಕುಳಿತಿದ್ದಾರೆ. ನಮ್ಮ ಮಾತೃಭಾಷೆಯನ್ನು ಕಲಿಯುವುದು ಸುಲಭ. ಅದರ ಜೊತೆಗೆ ಇತರೆ ಭಾಷೆಗಳನ್ನು ಕಲಿಯಬೇಕು ಎಂದರು.