ನವದೆಹಲಿ: ಪ್ರಜಾಸತಾತ್ಮಕ ವ್ಯವಸ್ಥೆಯಲ್ಲಿ ಲೋಕಸಭೆ ವಿಪಕ್ಷ ನಾಯಕ ಮಾತನಾಡಲು ಅವಕಾಶ ನೀಡಬೇಕು ಆದರೆ, ನವ ಭಾರತದಲ್ಲಿ ಮಾತನಾಡುವುದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮಹಾಕುಂಭ ಮೇಳ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ ನಂತರ ಪ್ರತಿಪಕ್ಷಗಳ ಪ್ರತಿಭಟನೆ ನಡುವೆ ಲೋಕಸಭೆ ಕಲಾಪವನ್ನು ಕೆಲಕಾಲ ಮುಂದೂಡಲಾಯಿತು.
ಬಳಿಕ ಸಂಸತ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಪ್ರಯಾಗ್ ರಾಜ್ ನ ಮಹಾಕುಂಭದಲ್ಲಿ ಜನವರಿ 29 ರಂದು ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ ಸಾವನ್ನಪ್ಪಿದ್ದವರಿಗೆ ಪ್ರಧಾನಿ ಮೋದಿ ಶ್ರದ್ದಾಂಜಲಿ ಸಲ್ಲಿಸಬೇಕು ಎಂದರು.
ಪ್ರಧಾನಿ ಮೋದಿ ಹೇಳಿದನ್ನು ನಾನು ಬೆಂಬಲಿಸಲು ಬಯಸುತ್ತೇನೆ. ಕುಂಭ ನಮ್ಮ ಸಂಪ್ರದಾಯ, ಐತಿಹಾಸಿಕ ಮತ್ತು ಸಂಸ್ಕೃತಿ. ಆದರೆ, ಮಹಾಕುಂಭ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರಿಗೆ ಪ್ರಧಾನಿ ಮೋದಿ ಶ್ರದ್ದಾಂಜಲಿ ಸಲ್ಲಿಸಲಿಲ್ಲ ಎಂಬ ದೂರು ಕೇಳಿಬಂದಿದೆ ಎಂದರು.
ನಾನು ಹೇಳಲು ಬಯಸುವ ಇನ್ನೊಂದು ವಿಷಯವೆಂದರೆ ಕುಂಭಕ್ಕೆ ಹೋದ ಯುವಕರಿಗೆ ಪ್ರಧಾನಿಯಿಂದ ಉದ್ಯೋಗ ಬೇಕು. ಉದ್ಯೋಗದ ಬಗ್ಗೆ ಪ್ರಧಾನಿ ಮಾತನಾಡಬೇಕು ಎಂದು ಕಾಂಗ್ರೆಸ್ ನಾಯಕ ಹೇಳಿದರು.
ಮಾತನಾಡಲು ಅವಕಾಶ ನೀಡಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ನಮಗೆ ಮಾತನಾಡಲು ಅವಕಾಶವಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷ ನಾಯಕನಿಗೆ ಮಾತನಾಡಲು ಅವಕಾಶ ನೀಡಬೇಕು. ಆದರೆ ಅವಕಾಶ ನೀಡಿಲ್ಲ. ಇದು ನವ ಭಾರತ ಎಂದು ಗಾಂಧಿ ಹೇಳಿದರು.