ಹಿಂಸಾಚಾರದ ವೇಳೆ ನಾಶವಾಗಿರುವ ವಾಹನಗಳು. 
ದೇಶ

Nagpur violence: ಹಲವೆಡೆ ಕರ್ಫ್ಯೂ ಜಾರಿ; 50ಕ್ಕೂ ಹೆಚ್ಚು ಜನರ ಬಂಧನ; ಸರ್ಕಾರದ ವಿರುದ್ಧ ವಿಪಕ್ಷಗಳ ಕಿಡಿ

ಔರಂಗಜೇಬ್‌ ನೋವು ಮತ್ತು ಗುಲಾಮಗಿರಿಯ ಸಂಕೇತ. ಹೀಗಾಗಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬ್‌ ಸಮಾಧಿ ತೆರವುಗೊಳಿಸಬೇಕು ಎಂದು ವಿಎಚ್‌ಪಿ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಸೋಮವಾರ ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಸಿದ್ದವು.

ನಾಗ್ಪುರ: ಮೊಘಲ್‌ ದೊರೆ ಔರಂಗಜೇಬ್ ಸಮಾಧಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಸಂಘರ್ಷ ಉಂಟಾಗಿದ್ದು, ಹಿಂಸಾಚಾರ ಭುಗಿಲೆದ್ದಿದೆ. ಘಟನೆ ಬೆನ್ನಲ್ಲೇ ಕೊತ್ವಾಲಿ ಸೇರಿದಂತೆ ಹಲವೆಡೆ ಕರ್ಫ್ಯೂ ಜಾರಿ ಮಾಡಲಾಗಿದ್ದು, 50ಕ್ಕೂ ಹೆಚ್ಚು ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ.

ಔರಂಗಜೇಬ್‌ ನೋವು ಮತ್ತು ಗುಲಾಮಗಿರಿಯ ಸಂಕೇತ. ಹೀಗಾಗಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬ್‌ ಸಮಾಧಿ ತೆರವುಗೊಳಿಸಬೇಕು ಎಂದು ವಿಎಚ್‌ಪಿ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಸೋಮವಾರ ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಸಿದ್ದವು. ಜೊತೆಗೆ ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಕೂಡಾ ಸಲ್ಲಿಸಿದ್ದವು.

ಪ್ರತಿಭಟನೆ ವೇಳೆ ಧರ್ಮಗ್ರಂಥ ಕುರಾನ್‌ ಸುಡಲಾಗಿದೆ ಎಂದು ವದಂತಿ ಹಬ್ಬಿಸಲಾಗಿದ್ದು, ಇದರಿಂದಾಗಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಹಿಂಸಾಚಾರದ ವೇಳೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಹಿಂಸಾಚಾರ ತಡೆಗೆ ಪೊಲೀಸರು ಆಶ್ರುವಾಯು ಸಿಡಿಸಿ, ಲಾಠಿಪ್ರಹಾರ ನಡೆಸಿದ್ದಾರೆ. ಈ ವೇಳೆ ಹಲವರು ಗಾಯಗೊಂಡಿದ್ದಾರೆ.

ನಿನ್ನೆ ಸಂಜೆ ಇಡೀ ನಾಗ್ಪುರ್​​ನಲ್ಲಿ ಪತ್ಥರ್​​​ಬಾಜಿ ನಡೆದಿದೆ. ದೊಣ್ಣೆಗಳನ್ನ ಹಿಡಿದು ರಸ್ತೆಗಳಲ್ಲಿ ದಾಂಧಲೆ ನಡೆಸಲಾಗಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ನಗರದಲ್ಲಿ 144 ಸೆಕ್ಷನ್​ ಜಾರಿ ಮಾಡಲಾಗಿದೆ.. ವದಂತಿಗೆ ಯಾರೂ ಕಿವಿಗೊಡದೇ, ಶಾಂತಿ ಕಾಪಾಡುವಂತೆ ನಾಗ್ಪುರ್​​​ ಲೋಕಲ್​​​ ಲೀಡರ್ಸ್​​​ ಕೇಂದ್ರ ಸಚಿವ ಗಡ್ಕರಿ ಮತ್ತು ಸಿಎಂ ಫಡ್ನವೀಸ್ ಮನವಿ ಮಾಡಿದ್ದಾರೆ.

ನಾವು ಪೊಲೀಸ್ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ನಾಗರಿಕರು ಅವರೊಂದಿಗೆ ಸಹಕರಿಸಬೇಕು. ನಾಗ್ಪುರ ಶಾಂತಿಯುತ ಮತ್ತು ಸಹಕಾರಿ ನಗರವಾಗಿದೆ. ಇದು ಇಲ್ಲಿನ ಶಾಶ್ವತ ಸಂಪ್ರದಾಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ವದಂತಿಗಳನ್ನು ನಂಬದೇ ಆಡಳಿತಕ್ಕೆ ಪೂರ್ಣ ಸಹಕಾರ ನೀಡಿ ಎಂದು ದೇವೇಂದ್ರ ಫಡ್ನವೀಸ್ ಅವರು ಹೇಳಿದ್ದಾರೆ.

ಈ ನಡುವೆ ಹಿಂದೂ ಸಂಘಟನೆಗಳಿಂದ ಸಮಾಧಿ ತೆರವಿಗೆ ಆಗ್ರಹ ಕೇಳಿಬಂದ ಬೆನ್ನಲ್ಲೇ ಸಮಾಧಿ ಸುತ್ತಮುತ್ತ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ಸಮಾಧಿಗೆ ಭೇಟಿ ನೀಡುವವರ ನೋಂದಣಿ, ಗುರುತಿನ ಚೀಟಿ ಪರಿಶೀಲನೆ ಕಡ್ಡಾಯಗೊಳಿಸಿದೆ. ಜೊತೆಗೆ ಖುಲ್ತಾಬಾದ್‌ ಪಟ್ಟಣ ಪ್ರವೇಶದ್ವಾರದಿಂದ ಸಮಾಧಿ ಇರುವ ಸ್ಥಳಕ್ಕೆ ಹೋಗುವ ಮಾರ್ಗದಲ್ಲಿ ಪೊಲೀಸರು ಹಲವಾರು ಭದ್ರತಾ ಠಾಣೆಗಳನ್ನು ಸ್ಥಾಪಿಸಿದ್ದಾರೆ. ಸದ್ಯ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರಾದರೂ, ನಗರದ ಪರಿಸ್ಥಿತಿಯು ಬೂದಿ ಮುಚ್ಚಿದ ಕೆಂಡದಂತಿದೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ 50 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದ್ದು, ಐದು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ರವೀಂದರ್ ಸಿಂಘಾಲ್ ಹೇಳಿದ್ದಾರೆ.

ಘಟನೆಯಲ್ಲಿ 34 ಪೊಲೀಸ್ ಸಿಬ್ಬಂದಿ ಮತ್ತು ಇತರ ಐದು ಜನರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಂದ್ರಶೇಖರ್ ಬವಾಂಕುಲೆ ತಿಳಿಸಿದ್ದಾರೆ.

ಐವರು ನಾಗರೀಕರ ಪೈಕಿ ಇಬ್ಬರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹಿಂಸಾಚಾರದಲ್ಲಿ 45 ವಾಹನಗಳು ಧ್ವಂಸಗೊಂಡಿವೆ. ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿಗಳ ನಿರ್ದೇಶನ ಹಿನ್ನೆಲೆಯಲ್ಲಿ ನಾಗ್ಪುರ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಲಿದ್ದು, ಪರಿಶೀಲನೆ ನಡೆಸಲಿದ್ದಾರೆಂದು ಹೇಳಿದ್ದಾರೆ.

ಘರ್ಷಣೆ ಹಿನ್ನೆಲೆ ಬಿಎನ್‌ಎಸ್‌ಎಸ್ ಸೆಕ್ಷನ್ 163ರ ಅಡಿಯಲ್ಲಿ ನಾಗ್ಪುರದ ಕೊತ್ವಾಲಿ, ಗಣೇಶ್‌ಪೇಟ್‌, ತೆಹಸಿಲ್, ಲಕಡ್ ಗಂಜ್, ಪಚ್‌ಪೋಲಿ, ಶಾಂತಿನಗರ, ನಂದನವನ್, ಇಮಾಮವಾಡ, ಯಶೋಧರನಗರ ಮತ್ತು ಕಪಿಲನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಘಟನೆ ಬೆನ್ನಲ್ಲೇ ವಿಪಕ್ಷಗಳು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಹರಿಹಾಯ್ದಿವೆ, ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿಯವರು, ಸಮಾಧಿಯನ್ನು ಹಾನಿಗೊಳಿಸುವುದು ಅಥವಾ ಒಡೆಯುವುದು ಸರಿಯಲ್ಲ. ಏಕೆಂದರೆ ಇದು ಅಲ್ಲಿನ ಪರಸ್ಪರ ಸಹೋದರತ್ವ, ಶಾಂತಿ ಮತ್ತು ಸಾಮರಸ್ಯವನ್ನು ಹಾಳು ಮಾಡುತ್ತದೆ. ಇಂತಹ ಅಶಿಸ್ತಿನ ನಡವಳಿಕೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಪರಿಸ್ಥಿತಿ ಹದಗೆಡಬಹುದು ಎಂದು ಹೇಳಿದ್ದಾರೆ.

ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡ ಅವರು ಟ್ವೀಟ್ ಮಾಡಿ, ಹಿಂಸಾಚಾರವನ್ನು ಪ್ರಚೋದಿಸುವುದು, ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸುವುದರಿಂದ ಆರ್ಥಿಕ ಹೊರೆಯಾಗಲಿದೆ. ಮಹಾರಾಷ್ಟ್ರ ರಾಜ್ಯವನ್ನು ಹೂಡಿಕೆಗೆ ಆಕರ್ಷಕವಲ್ಲದ ರಾಜ್ಯವನ್ನಾಗಿ ಮಾಡುತ್ತದೆ, ಇದು ನೆರೆಯ ರಾಜ್ಯವು ಲಾಭ ಪಡೆಯಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ರಾಜ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಅವರು ಮಾತನಾಡಿ,. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಅವರ ನೇತೃತ್ವದ ಸರ್ಕಾರವನ್ನು ಟೀಕಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಮತ್ತು ಗೃಹ ಖಾತೆಯನ್ನು ಹೊಂದಿರುವ ರಾಜ್ಯ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನಾಗ್ಪುರ ಹಿಂಸಾಚಾರದ ಹಿಂದೆ ಇದ್ದಾರೆ, ಮುಖ್ಯಮಂತ್ರಿ ಗೃಹ ಖಾತೆಯನ್ನು ಹೊಂದಿದ್ದಾರೆ. ಆದರೆ ಅವರ ತವರು ನೆಲದಲ್ಲಿ ಹಿಂಸಾಚಾರದ ಸಂಭವನೀಯತೆಯ ಬಗ್ಗೆ ಅವರಿಗೆ ತಿಳಿದಿಲ್ಲ ಎಂದು ಕಿಡಿಕಾರಿದ್ದಾರೆ.

ಫಢ್ನವೀಸ್ ಸರ್ಕಾರ ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಹಿಂಸಾಚಾರವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ. ಇಂತಹ ಹಿಂಸಾಚಾರವು ಹಿಂದೂಗಳು ಮತ್ತು ಮುಸ್ಲಿಮರ ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ, ಆದರೆ ಸರ್ಕಾರ ಅದರಿಂದ ರಾಜಕೀಯ ಲಾಭವನ್ನು ಪಡೆಯಲು ಬಯಸುತ್ತದೆ. ಬಿಜೆಪಿ ಮತ್ತು ಅದರ ಸಂಬಂಧಿತ ಸಂಘಟನೆಗಳು ರಾಜ್ಯದಲ್ಲಿ ಸಾಮರಸ್ಯವನ್ನು ಹಾಳು ಮಾಡಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT