ಪುಣೆ: ಬುಧವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿದ್ದು, ಖಾಸಗಿ ಮಿನಿ ಬಸ್ ಗೆ ಬೆಂಕಿ ಹೊತ್ತಿದ ಪರಿಣಾಮ ಬಸ್ ನಲ್ಲಿದ್ದ ಪ್ರಯಾಣಿಕರ ಪೈಕಿ 4 ಮಂದಿ ಸಜೀವ ದಹನವಾಗಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಖಾಸಗಿ ಕಂಪನಿಯೊಂದರ ವಾಹನಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಉದ್ಯೋಗಿಗಳು ಸುಟ್ಟು ಕರಕಲಾಗಿದ್ದು, ಐದು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಣೆ ಹೊರವಲಯದ ಪಿಂಪ್ರಿ ಚಿಂಚ್‌ವಾಡ್ ಪ್ರದೇಶದ ಹಿಂಜೇವಾಡಿಯಲ್ಲಿ ಬೆಳಿಗ್ಗೆ 7.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ವಾಹನವು ವ್ಯೋಮಾ ಗ್ರಾಫಿಕ್ಸ್‌ನ 12 ಉದ್ಯೋಗಿಗಳನ್ನು ವಾರ್ಜೆಯಿಂದ ಹಿಂಜೇವಾಡಿಗೆ ಕರೆದೊಯ್ಯುತ್ತಿತ್ತು. ವಾಹನವು ಡಸ್ಸಾಲ್ಟ್ ಸಿಸ್ಟಮ್ಸ್ ಬಳಿ ಇದ್ದಾಗ, ಚಾಲಕನ ಪಾದದ ಬಳಿ ಮೊದಲು ಬೆಂಕಿ ಕಾಣಿಸಿಕೊಂಡಿತು.
ಬೆಂಕಿ ಮುಂಭಾಗಕ್ಕೆ ಹರಡುತ್ತಿದ್ದಂತೆಯೇ ಚಾಲಕ ವಾಹನವನ್ನು ನಿಲ್ಲಿಸಿದ್ದಾನೆ. ಅಪಾಯವನ್ನು ಅರಿತ ನಾಲ್ವರು ಉದ್ಯೋಗಿಗಳು ತಕ್ಷಣ ಮಿನಿ ಬಸ್‌ನಿಂದ ಇಳಿದರು. ವಾಹನದ ಹಿಂಭಾಗದಲ್ಲಿರುವ ತುರ್ತು ನಿರ್ಗಮನ ದ್ವಾರದ ಮೂಲಕ ತಪ್ಪಿಸಿಕೊಳ್ಳಲು ಕೆಲ ಸಿಬ್ಬಂದಿ ಪ್ರಯತ್ನಿಸಿದರು.
ಆದರೆ ನಿರ್ಗಮನ ಬಾಗಿಲು ಜಾಮ್ ಆಗಿ ತೆರೆದುಕೊಳ್ಳದ ಕಾರಣ ಕೆಲ ಉದ್ಯೋಗಿಗಳು ಬೆಂಕಿಯಲ್ಲಿ ಸಿಲುಕಿಕೊಂಡರು. ಹೀಗಾಗಿ 4 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೆ ನಾಲ್ವರನ್ನು ಇತರರ ನೆರವಿನಿಂದ ರಕ್ಷಿಸಲಾಗಿದ್ದು ಸುಟ್ಟಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶವಗಳನ್ನು ವಾಹನದಿಂದ ಹೊರತೆಗೆದು ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿನಿ ಬಸ್‌ನ ಹಿಂಭಾಗದಲ್ಲಿರುವ ತುರ್ತು ನಿರ್ಗಮನ ದ್ವಾರವನ್ನು ತೆರೆಯಲು ಸಾಧ್ಯವಾಗದ ಕಾರಣ ಸಾವು ನೋವು ಸಂಭವಿಸಿದೆ ಎಂದು ಹಿಂಜೆವಾಡಿ ಉಪ ಪೊಲೀಸ್ ಆಯುಕ್ತ ವಿಶಾಲ್ ಗಾಯಕ್ವಾಡ್ ತಿಳಿಸಿದ್ದಾರೆ.