ಲಖನೌ: ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಅಥವಾ ಐಎಸ್‌ಐಗೆ ಸಾಮಾಜಿಕ ಮಾಧ್ಯಮಗಳ ಮೂಲಕ ವರ್ಗೀಕೃತ ಮತ್ತು ಸೂಕ್ಷ್ಮ ರಕ್ಷಣಾ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಕಾನ್ಪುರ ಶಸ್ತ್ರಾಸ್ತ್ರ ಕಾರ್ಖಾನೆಯ ಉದ್ಯೋಗಿಯನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ(ಯುಪಿ ಎಟಿಎಸ್) ಬುಧವಾರ ಬಂಧಿಸಿದೆ. ಇದರೊಂದಿಗೆ ಕಳೆದ ಐದು ದಿನಗಳಲ್ಲಿ ಶಸ್ತ್ರಾಸ್ತ್ರ ಕಾರ್ಖಾನೆಯ ಇಬ್ಬರು ಸಿಬ್ಬಂದಿಯನ್ನು ಬಂಧಿಸಲಾಗಿದೆ.
ಯುಪಿ ಎಟಿಎಸ್ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, ಕಾನ್ಪುರ ಆರ್ಡನೆನ್ಸ್ ಫ್ಯಾಕ್ಟರಿಯಲ್ಲಿ ಜೂನಿಯರ್ ವರ್ಕ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಕುಮಾರ್ ವಿಕಾಸ್ ನನ್ನು ಬಂಧಿಸಲಾಗಿದೆ.
ಆರೋಪಿಯು 'ನೇಹಾ ಶರ್ಮಾ' ಎಂಬ ನಕಲಿ ಹೆಸರಿನ ಪಾಕಿಸ್ತಾನಿ ಏಜೆಂಟ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎಂದು ಎಟಿಎಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಕುಮಾರ್ ವಿಕಾಸ್ ಶಸ್ತ್ರಾಸ್ತ್ರ ತಯಾರಿಕೆ, ಉದ್ಯೋಗಿ ಹಾಜರಾತಿ ಹಾಳೆಗಳು, ಯಂತ್ರ ವಿನ್ಯಾಸಗಳು ಮತ್ತು ಉತ್ಪಾದನಾ ಚಾರ್ಟ್‌ಗಳಿಗೆ ಸಂಬಂಧಿಸಿದ ಗೌಪ್ಯ ದಾಖಲೆಗಳು ಮತ್ತು ಸೂಕ್ಷ್ಮ ಡೇಟಾವನ್ನು ವಾಟ್ಸಾಪ್ ಮೂಲಕ ಐಎಸ್‌ಐ ಏಜೆಂಟ್ ಗೆ ನೀಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಕಳೆದ ಮಾರ್ಚ್ 14 ರಂದು ಫಿರೋಜಾಬಾದ್ ಶಸ್ತ್ರಾಸ್ತ್ರ ಕಾರ್ಖಾನೆಯ ಮತ್ತೊಬ್ಬ ಉದ್ಯೋಗಿ ರವೀಂದ್ರ ಕುಮಾರ್ ನನ್ನು ಯುಪಿ ಎಟಿಎಸ್ ಬಂಧಿಸಿತ್ತು. ಕುಮಾರ್ ವಿಕಾಸ್ ಕೂಡ ರವೀಂದ್ರ ಕುಮಾರ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಇಬ್ಬರೂ ಐಎಸ್‌ಐನ 'ನೇಹಾ ಶರ್ಮಾ' ಕೋಡ್ ನೇಮ್‌ಗೆ ಡೇಟಾವನ್ನು ಸೋರಿಕೆ ಮಾಡಿದ್ದಾರೆ.
ಫಿರೋಜಾಬಾದ್ ಶಸ್ತ್ರಾಸ್ತ್ರ ಕಾರ್ಖಾನೆಯ ರವೀಂದ್ರ ಕುಮಾರ್ ಬಂಧನದ ನಂತರ, ಜೂನಿಯರ್ ವರ್ಕ್ಸ್ ಮ್ಯಾನೇಜರ್ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ ವಿಕಾಸ್ ಸಹ ಐಎಸ್ಐ ಏಜೆಂಟ್ ಜತೆ ನಿರಂತರ ಸಂಪರ್ಕದಲ್ಲಿದ್ದಾನೆ ಎಂಬ ಸುಳಿವು ಎಟಿಎಸ್‌ಗೆ ಸಿಕ್ಕಿದೆ.
ಸಂಪೂರ್ಣ ತನಿಖೆಯ ನಂತರ, 2025 ರಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆ ಫೇಸ್‌ಬುಕ್ ಮೂಲಕ ನೇಹಾ ಶರ್ಮಾ ಅವರ ಸಂಪರ್ಕಕ್ಕೆ ಬಂದಿರುವುದು ಪತ್ತೆಯಾಗಿದೆ.
ನೇಹಾ ಶರ್ಮಾ ಬಿಎಚ್‌ಇಎಲ್(ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್) ಉದ್ಯೋಗಿ ಎಂದು ಹೇಳಿಕೊಂಡು, ಕುಮಾರ್ ವಿಕಾಸ್ ಮತ್ತು ರವೀಂದ್ರ ಕುಮಾರ್ ಇಬ್ಬರೊಂದಿಗೂ ಮೆಸೆಂಜರ್ ಮೂಲಕ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.