ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಇಂದು ಗುರುವಾರ ಭಯೋತ್ಪಾದಕರೊಂದಿಗೆ ನಡೆದ ಮತ್ತೊಂದು ಗುಂಡಿನ ಚಕಮಕಿಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ, ಕಳೆದ ನಾಲ್ಕು ದಿನಗಳಿಂದ ಇಲ್ಲಿ ಬೃಹತ್ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿರಾನಗರ ವಲಯದಲ್ಲಿ ಮೊನ್ನೆ ಭಾನುವಾರ ನಡೆದ ಎನ್‌ಕೌಂಟರ್ ಸ್ಥಳದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ರಾಜ್‌ಬಾಗ್‌ನ ಘಾಟಿ ಜುಥಾನಾ ಪ್ರದೇಶದ ಜಖೋಲೆ ಗ್ರಾಮದ ಬಳಿ ಭದ್ರತಾ ಪಡೆಗಳು ಇಂದು ಬೆಳಗ್ಗೆ ಭಯೋತ್ಪಾದಕರು ಕಾಣಿಸಿಕೊಂಡಾಗ ಗುಂಡಿನ ಚಕಮಕಿ ಪ್ರಾರಂಭವಾಯಿತು.
ಎರಡೂ ಕಡೆ ಭಾರೀ ಮಟ್ಟದಲ್ಲಿ ಗುಂಡಿನ ಚಕಮಕಿ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿಯ ಬಳಿಯ ಸನ್ಯಾಲ್ ಹಳ್ಳಿಯ ನರ್ಸರಿಯಲ್ಲಿರುವ ಪ್ರದೇಶದೊಳಗೆ ಉಗ್ರರ ಉಪಸ್ಥಿತಿಯ ಬಗ್ಗೆ ಗುಪ್ತಚರ ಮಾಹಿತಿ ಪಡೆದ ನಂತರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಕಾರ್ಯಾಚರಣೆ ಆರಂಭಿಸಿದಾಗ ಕಳೆದ ಭಾನುವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಗುಂಡಿನ ಚಕಮಕಿ ನಡೆದಿತ್ತು. ಹಿರಾನಗರ ವಲಯದಲ್ಲಿ ತಪ್ಪಿಸಿಕೊಂಡ ಅದೇ ಗುಂಪು ಭಯೋತ್ಪಾದಕರು ಇಂದು ಗುಂಡಿನ ಚಕಮಕಿಯಲ್ಲಿ ಸಿಕ್ಕಿಹಾಕಿಕೊಂಡಿದ್ದು ಎಂದು ನಂಬಲಾಗಿದೆ.
ಪೊಲೀಸರು, ಸೇನೆ, ಎನ್‌ಎಸ್‌ಜಿ, ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ಒಳಗೊಂಡ ಬೃಹತ್ ಶೋಧ ಕಾರ್ಯಾಚರಣೆಯು ತಾಂತ್ರಿಕ ಮತ್ತು ಕಣ್ಗಾವಲು ಉಪಕರಣಗಳೊಂದಿಗೆ ಶಸ್ತ್ರಸಜ್ಜಿತವಾಗಿದ್ದು, ಹೆಲಿಕಾಪ್ಟರ್, ಯುಎವಿಗಳು, ಡ್ರೋನ್‌ಗಳು, ಗುಂಡು ನಿರೋಧಕ ವಾಹನಗಳು ಮತ್ತು ಶ್ವಾನಗಳ ಸಹಾಯದಿಂದ ಭಯೋತ್ಪಾದಕರನ್ನು ಪತ್ತೆಹಚ್ಚುವ ಕಾರ್ಯವನ್ನು ಮುಂದುವರೆಸಿದೆ. ಕಂದರ ಮಾರ್ಗ ಅಥವಾ ಗಡಿಯಾಚೆಯಿಂದ ಹೊಸದಾಗಿ ರಚಿಸಲಾದ ಸುರಂಗದ ಮೂಲಕ ಭಯೋತ್ಪಾದಕರು ನುಸುಳಿದ್ದಾರೆಂದು ಹೇಳಲಾಗುತ್ತಿದೆ.
ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ವಿಶೇಷವಾಗಿ ಬಿಲ್ಲವರ್ ಅರಣ್ಯಕ್ಕೆ ಹೋಗುವ ಮಾರ್ಗಗಳಲ್ಲಿ ವಿಸ್ತರಿಸಲಾಗಿದ್ದು, ಭಯೋತ್ಪಾದಕರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊನ್ನೆ ಸೋಮವಾರ ಹಿರಾನಗರದಲ್ಲಿ ಎನ್‌ಕೌಂಟರ್ ನಡೆದ ಸ್ಥಳದ ಬಳಿ ನಾಲ್ಕು ಲೋಡ್ ಮಾಡಿದ ಎಂ 4 ಕಾರ್ಬೈನ್ ಮದ್ದುಗುಂಡುಗಳು, ಎರಡು ಗ್ರೆನೇಡ್‌ಗಳು, ಬುಲೆಟ್ ಪ್ರೂಫ್ ಜಾಕೆಟ್, ಸ್ಲೀಪಿಂಗ್ ಬ್ಯಾಗ್‌ಗಳು, ಟ್ರ್ಯಾಕ್‌ಸೂಟ್‌ಗಳು, ಹಲವಾರು ಪ್ಯಾಕೆಟ್‌ಗಳು ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು ತಯಾರಿಸಲು ವಸ್ತುಗಳನ್ನು ಹೊಂದಿರುವ ಪ್ರತ್ಯೇಕ ಪಾಲಿಥಿನ್ ಬ್ಯಾಗ್ ಗಳು ಸಿಕ್ಕಿದ್ದವು.
ಪೊಲೀಸ್ ಮಹಾನಿರ್ದೇಶಕ ನಳಿನ್ ಪ್ರಭಾತ್ ಅವರು ಕಥುವಾದಲ್ಲಿ ಮೊಕ್ಕಾಂ ಹೂಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಜಮ್ಮು ವಲಯದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಭೀಮ್ ಸೇನ್ ಟುಟಿ ಅವರೊಂದಿಗೆ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಮುನ್ನಡೆಸಲಾಗಿದೆ.