ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಈದ್ ಚಂದ್ರ ಕಾಣಿಸಿಕೊಂಡಿದ್ದಾನೆ. ಲಕ್ನೋ ಈದ್ಗಾದ ಇಮಾಮ್ ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಾಲಿ ಚಂದ್ರನ ದರ್ಶನವನ್ನು ಘೋಷಿಸಿದ್ದು ಈದ್ ಅನ್ನು ನಾಳೆ ಅಂದರೆ ಮಾರ್ಚ್ 31ರಂದು ಆಚರಿಸಲಾಗುವುದು ಎಂದು ಹೇಳಿದರು.
ವರದಿಗಳ ಪ್ರಕಾರ, ದೇಶದ ಹಲವು ಭಾಗಗಳಲ್ಲಿ ಚಂದ್ರನ ದರ್ಶನ ದೃಢಪಟ್ಟಿದೆ. ನವದೆಹಲಿ, ಲಕ್ನೋ, ಬೆಂಗಳೂರು, ನೋಯ್ಡಾ, ಕೋಲ್ಕತ್ತಾ, ಚೆನ್ನೈ, ಪಾಟ್ನಾ ಮತ್ತು ಮುಂಬೈ ಸೇರಿದಂತೆ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಭಾನುವಾರ ಸಂಜೆ ಈದ್-ಉಲ್-ಫಿತರ್ ಚಂದ್ರನನ್ನು ನೋಡಿದ ನಂತರ ಮಾರ್ಚ್ 31 ರಂದು ಭಾರತದಾದ್ಯಂತ ಈದ್ ಆಚರಿಸಲಾಗುತ್ತದೆ. ಶವ್ವಾಲ್ ತಿಂಗಳು ಚಂದ್ರನ ದರ್ಶನದೊಂದಿಗೆ ಪ್ರಾರಂಭವಾಗಿದೆ. 30 ದಿನಗಳ ಉಪವಾಸದ ನಂತರ, ಪವಿತ್ರ ರಂಜಾನ್ ತಿಂಗಳು ಮುಗಿದು ಶವ್ವಾಲ್ ಪ್ರಾರಂಭವಾಗಿದೆ. ಇದು ರಂಜಾನ್ ಅಂತ್ಯದ ನಂತರ ಬರುವ ಇಸ್ಲಾಮಿಕ್ ಕ್ಯಾಲೆಂಡರ್‌ನ 10ನೇ ತಿಂಗಳು.
ಮುಸ್ಲಿಂ ಸಮುದಾಯಕ್ಕೆ ಈದ್ ಒಂದು ಪ್ರಮುಖ ಹಬ್ಬ. ಈದ್-ಉಲ್-ಫಿತರ್ ಇಸ್ಲಾಂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಮುಸ್ಲಿಂ ಸಮುದಾಯದ ಜನರು ರಂಜಾನ್ ತಿಂಗಳು ಪೂರ್ತಿ ಉಪವಾಸ ವ್ರತ ಆಚರಿಸುತ್ತಾರೆ. ನಂತರ ಈದ್ ಹಬ್ಬ ಬರುತ್ತದೆ. ಉಪವಾಸ ಮತ್ತು ಪ್ರಾರ್ಥನೆಯ ಪವಿತ್ರ ತಿಂಗಳು ಈದ್ ಉಲ್ ಫಿತರ್ ನೊಂದಿಗೆ ಕೊನೆಗೊಳ್ಳುತ್ತದೆ. ಈ ವಿಶೇಷ ದಿನದಂದು ಜನರು ಪರಸ್ಪರ ಹಾರೈಸುತ್ತಾರೆ ಮತ್ತು ಸಹೋದರತ್ವದ ಸಂದೇಶವನ್ನು ಹರಡುತ್ತಾರೆ. ಪ್ರೀತಿ, ಶಾಂತಿ ಮತ್ತು ಸಮೃದ್ಧಿಯ ಆಶಯದೊಂದಿಗೆ ಈ ಹಬ್ಬವನ್ನು ಪ್ರಪಂಚದಾದ್ಯಂತ ಸಂತೋಷದಿಂದ ಆಚರಿಸಲಾಗುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಈದ್‌ಗಾಗಿ ಕಾಯುತ್ತಾರೆ.