ನವದೆಹಲಿ: ಭಾರತೀಯ ಸೇನೆಯು ಧೈರ್ಯ ಮತ್ತು ಸಂಯಮವನ್ನು ಪ್ರದರ್ಶಿಸಿದೆ. ಪಾಕಿಸ್ತಾನದ ಅನೇಕ ಸೇನಾ ನೆಲೆಗಳ ಮೇಲೆ ದಾಳಿ ಮಾಡುವ ಮೂಲಕ ತಕ್ಕ ಉತ್ತರ ನೀಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದ್ದಾರೆ.
ಬ್ರಹ್ಮೋಸ್ ಉತ್ಪಾದನಾ ಘಟಕವನ್ನು ಉದ್ಘಾಟಿಸಲು ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವರ್ಚುವಲ್ ಆಗಿ ಮಾತನಾಡಿದ ಅವರು, ಆಪರೇಷನ್ ಸಿಂಧೂರ ಕೇವಲ ಮಿಲಿಟರಿ ಕ್ರಮವಲ್ಲ. ಆದರೆ, ಭಯೋತ್ಪಾದನೆ ವಿರುದ್ಧ ಹೋರಾಡಲು ಭಾರತದ ರಾಜಕೀಯ, ಸಾಮಾಜಿಕ ಮತ್ತು ಕಾರ್ಯತಂತ್ರದ ಇಚ್ಛಾಶಕ್ತಿಯ ಸಂಕೇತವಾಗಿದೆ ಎಂದು ಹೇಳಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಏಳು ಭಯೋತ್ಪಾದಕ ನೆಲೆಗಳನ್ನು ನಾಶಮಾಡಲು ಮೇ 7ರಂದು ಆಪರೇಷನ್ ಸಿಂಧೂರವನ್ನು ಪ್ರಾರಂಭಿಸಲಾಯಿತು.
ಪಾಕಿಸ್ತಾನದ ಆಕ್ರಮಣಗಳಿಗೆ ನಂತರದ ಎಲ್ಲ ಪ್ರತೀಕಾರ ಕ್ರಮಗಳನ್ನು ಆಪರೇಷನ್ ಸಿಂಧೂರ ಅಡಿಯಲ್ಲಿ ನಡೆಸಲಾಯಿತು. ಭಾರತ ಮತ್ತು ಪಾಕಿಸ್ತಾನ ಶನಿವಾರ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಕೊಂಡಿವೆ.
ಆಪರೇಷನ್ ಸಿಂಧೂರ ಮೂಲಕ, ಭಾರತೀಯ ಸೇನೆಯು ಅನೇಕ ಕುಟುಂಬಗಳ ಸಿಂಧೂರವನ್ನು ಅಳಿಸಿಹಾಕಿದ ಭಯೋತ್ಪಾದಕರನ್ನು ಶಿಕ್ಷಿಸಿತು. ಗಡಿಯ ಎರಡೂ ಬದಿಗಳಲ್ಲಿ ಭಯೋತ್ಪಾದನೆ ವಿರುದ್ಧ ನವ ಭಾರತ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ ಎಂದು ಸಿಂಗ್ ಹೇಳಿದರು.
ಭಾರತೀಯ ಸೇನೆಯು ಪಾಕಿಸ್ತಾನದ ನಾಗರಿಕರನ್ನು ಎಂದಿಗೂ ಗುರಿಯಾಗಿಸಿಕೊಂಡಿಲ್ಲ. ಆದರೆ, ಆ ದೇಶವು ಭಾರತದ ವಸತಿ ಪ್ರದೇಶಗಳು ಮತ್ತು ಪೂಜಾ ಸ್ಥಳಗಳನ್ನು ಗುರಿಯಾಗಿಸಿಕೊಂಡಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ಪಾಕಿಸ್ತಾನಕ್ಕೆ ಪ್ರವೇಶಿಸಿ ಹಲವಾರು ದಾಳಿಗಳನ್ನು ನಡೆಸಿತು ಎಂಬುದನ್ನು ಜಗತ್ತು ನೋಡಿದೆ ಎಂದು ಅವರು ಹೇಳಿದರು.
ನಾವು ಗಡಿ ಸಮೀಪವಿರುವ ಮಿಲಿಟರಿ ನೆಲೆಗಳ ವಿರುದ್ಧ ಕ್ರಮ ಕೈಗೊಂಡಿದ್ದಲ್ಲದೆ, ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ಇರುವ ರಾವಲ್ಪಿಂಡಿಯಲ್ಲಿಯೂ ಸಹ ಭಾರತೀಯ ಪಡೆಗಳ ಶಕ್ತಿ ಏನೆಂಬುದನ್ನು ತೋರಿಸಲಾಗಿದೆ ಎಂದು ಅವರು ಹೇಳಿದರು.