ನವದೆಹಲಿ: ಚೀನಾದ ಉಪಗ್ರಹ ಸಂಸ್ಥೆ (MIZAZVISION) ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರಣ (Satellite image)ದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ದಾಳಿಯ ನಂತರ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಯಲ್ಲಿ ಹಾನಿಯಾಗಿರುವುದನ್ನು ತೋರಿಸಿದೆ.
ಭಾರತೀಯ ಸಶಸ್ತ್ರ ಪಡೆಗಳು ರಫೀಕಿ, ಮುರಿದ್, ನೂರ್ ಖಾನ್, ಪಂಜಾಬ್‌ನ ಚುನಿಯನ್ ಮತ್ತು ಸುಕ್ಕೂರ್‌ನಲ್ಲಿರುವ ಪಾಕಿಸ್ತಾನದ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ.
ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಸೇನೆಯ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್, ರಾವಲ್ಪಿಂಡಿಯ ನೂರ್ ಖಾನ್ ವಾಯು ನೆಲೆ, ಚಕ್ವಾಲ್‌ನ ಮುರಿದ್ ನೆಲೆ ಮತ್ತು ಪಂಜಾಬ್ ಪ್ರಾಂತ್ಯದ ಜಾಂಗ್ ಜಿಲ್ಲೆಯ ರಫೀಕಿ ವಾಯು ನೆಲೆಯ ಮೇಲೆ ಭಾರತ ಕ್ಷಿಪಣಿ ದಾಳಿ ನಡೆಸಿದೆ ಎಂದು ಹೇಳಿದ್ದಾರೆ.
ನೂರ್ ಖಾನ್ ವಾಯುನೆಲೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ರಾವಲ್ಪಿಂಡಿಯ ಚಕ್ಲಾಲಾದಲ್ಲಿದೆ. ಇದು ಪಾಕಿಸ್ತಾನದ ವಾಯುನೆಲೆಗಳಲ್ಲಿ ಅತ್ಯಂತ ಪ್ರಮುಖವಾಗಿದೆ ಮತ್ತು ಪಾಕಿಸ್ತಾನದ ಪ್ರಮುಖ ವಿಮಾನ ಸಂಚಾರದ ನೆಲೆಯಾಗಿದೆ ಮತ್ತು ಇದನ್ನು ಲಾಜಿಸ್ಟಿಕಲ್ ಮತ್ತು ಕಾರ್ಯತಂತ್ರದ ಏರ್‌ಲಿಫ್ಟ್ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ.
C-130 ಹರ್ಕ್ಯುಲಸ್ ಮತ್ತು ಸಾಬ್ 2000 ರಂತಹ ಸಾರಿಗೆ ವಿಮಾನಗಳು, ಮತ್ತು VIP ಕರೆದೊಯ್ಯುವ ವಿಮಾನದ ಜೊತೆಗೆ ಹಾರಾಟದ ಮಧ್ಯ ಇಂಧನ ತುಂಬಿಸುವ IL-78 ವಿಮಾನವೂ ಇದೆ.
ನಾಲ್ಕು ದಿನಗಳ ಸೇನಾ ಕಾರ್ಯಾಚರಣೆ ನಂತರ ಶನಿವಾರ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಂಡವು. ಭಾರತ ಮತ್ತು ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವೆ ನಡೆದ ಮಾತುಕತೆ ನಂತರ ಕದನ ವಿರಾಮ ಮಾತುಕತೆ ನಡೆದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ.