ಪುಣೆ: ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಸೇನಾ ಸಂಘರ್ಷದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದ ಟರ್ಕಿಗೆ ಭಾರತದ ವ್ಯಾಪಾರಿಗಳು ಶಾಕ್ ನೀಡಿದ್ದಾರೆ.
ಹೌದು.. ಇತ್ತೀಚೆಗೆ ನಡೆದ ಭಾರತ ಮತ್ತು ಪಾಕಿಸ್ತಾನ ಸೇನಾ ಸಂಘರ್ಷದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದ ಟರ್ಕಿಗೆ ಮಹಾರಾಷ್ಟ್ರದ ಆ್ಯಪಲ್ ವ್ಯಾಪಾರಿಗಳು ಆಘಾತ ನೀಡಿದ್ದು, ಇನ್ನು ಮುಂದೆ ಟರ್ಕಿ ಆ್ಯಪಲ್ ಗಳನ್ನು ಖರೀದಿಸುವುದಿಲ್ಲ ಎಂದು ಖಡಕ್ ನಿರ್ಣಯ ಕೈಗೊಂಡಿದ್ದಾರೆ.
ಮಹಾರಾಷ್ಟ್ರದ ಪುಣೆಯ ಆಪಲ್ ವ್ಯಾಪಾರಿಗಳು ಟರ್ಕಿಶ್ ಸೇಬುಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಪುಣೆಯ APMC ಮಾರುಕಟ್ಟೆಯ ಸೇಬು ವ್ಯಾಪಾರಿ ಸುಯೋಗ್ ಝೆಂಡೆ, "ಟರ್ಕಿ ಪಾಕಿಸ್ತಾನವನ್ನು ಬೆಂಬಲಿಸುವುದರಿಂದ ನಾವು ಅದರಿಂದ ಸೇಬುಗಳನ್ನು ಖರೀದಿಸುವುದನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ ಎಂದು ಘೋಷಿಸಿದ್ದಾರೆ.
ಅಲ್ಲದೆ ವಿದೇಶಗಳಿಂದ ಆ್ಯಪಲ್ ಖರೀದಿಸುವ ಬದಲು ನಮ್ಮದೇ ಹಿಮಾಚಲ ಪ್ರದೇಶ ಮತ್ತು ಇತರ ಪ್ರದೇಶಗಳಿಂದ ಸೇಬುಗಳನ್ನು ಖರೀದಿಸಲು ಬಯಸುತ್ತೇವೆ. ಭಾರತ ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಳ್ಳುತ್ತಿತ್ತು, ಆದರೆ ಟರ್ಕಿ ಪಾಕಿಸ್ತಾನಕ್ಕೆ ಡ್ರೋನ್‌ಗಳನ್ನು ಪೂರೈಸಿತು. ಹೀಗಾಗಿ ಟರ್ಕಿಶ್ ಆ್ಯಪಲ್ ಗಳನ್ನು ನಾವು ಖರೀದಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಚಿಲ್ಲರೆ ಗ್ರಾಹಕರು ಸಹ ಟರ್ಕಿಶ್ ಸೇಬುಗಳನ್ನು ಬಯಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಅವುಗಳನ್ನು ನೋಡಿ, ನಾವು ಟರ್ಕಿಶ್ ಸೇಬುಗಳನ್ನು ಬಹಿಷ್ಕರಿಸಲು ಸಹ ನಿರ್ಧರಿಸಿದ್ದೇವೆ. ಟರ್ಕಿಶ್ ಸೇಬುಗಳನ್ನು ಇಲ್ಲಿ 3 ತಿಂಗಳ ಕಾಲ ಮಾರಾಟ ಮಾಡಲಾಗುತ್ತದೆ ಮತ್ತು ಈ ವ್ಯವಹಾರವು ಸುಮಾರು 1200-1500 ಕೋಟಿ ರೂ. ಮೌಲ್ಯದ್ದಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಭೂಕಂಪದ ಸಂದರ್ಭದಲ್ಲಿ ಟರ್ಕಿ ಬೆಂಬಲಕ್ಕೆ ನಿಂತಿದ್ದ ಭಾರತ
ಇನ್ನು ಈ ಹಿಂದೆ ಇದೇ ಟರ್ಕಿಯಲ್ಲಿ ಭೀಕರ ಭೂಕಂಪ ಸಂಭವಿಸಿದಾಗ, ಅಂದು ಭಾರತವು ಅವರಿಗೆ ಸಹಾಯ ಮಾಡಿದ ಮೊದಲ ದೇಶವಾಗಿತ್ತು, ಆದರೆ ಈ ನೆರವನ್ನು ಮರೆತ ಟರ್ಕಿ ಇಂದು ಯುದ್ಧದಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿದೆ. ಆ ಮೂಲಕ ತನ್ನ ನಿಯತ್ತು ಏನಿದ್ದರೂ ಮುಸ್ಲಿಂ ರಾಷ್ಟ್ರಕ್ಕೆ ಮಾತ್ರ ಎಂಬುದನ್ನು ಮತ್ತೆ ಸಾಬೀತು ಮಾಡಿದೆ.