ಮುಂಬೈ: ಕ್ರಿಪ್ಟೊ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಉತ್ತಮ ಆದಾಯ ಪಡೆಯಬಹುದು ಎಂದು ನಂಬಿಸಿ 53 ವರ್ಷದ ಮಹಿಳೆಯೊಬ್ಬರಿಗೆ ಆಕೆಯ ಫೇಸ್‌ಬುಕ್ 'ಸ್ನೇಹಿತ', ಕಳೆದ ನಾಲ್ಕೂವರೆ ವರ್ಷಗಳಲ್ಲಿ 79 ಲಕ್ಷ ರೂ. ವಂಚಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
"ಜುಬೇರ್ ಶಂಶಾದ್ ಖಾನ್ ಎಂದು ಗುರುತಿಸಲಾದ ಆರೋಪಿ, ಮುಂಬೈನ ಗೋರೆಗಾಂವ್ ನಿವಾಸಿ ಮಹಿಳೆಗೆ ಕ್ರಿಪ್ಟೊಕರೆನ್ಸಿ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಿದ್ದಾನೆ ಮತ್ತು ಹೆಚ್ಚಿನ ಆದಾಯದ ಭರವಸೆ ನೀಡಿದ್ದಾನೆ" ಎಂದು ನವಿ ಮುಂಬೈನ ಖಾರ್ಘರ್ ಪೊಲೀಸ್ ಠಾಣೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಹಿಳೆ ಅಕ್ಟೋಬರ್ 2020 ರಿಂದ ಮಾರ್ಚ್ 2025 ರವರೆಗೆ ಹಲವು ವಹಿವಾಟುಗಳಲ್ಲಿ 78,82,684 ರೂ.ಗಳನ್ನು ಹೂಡಿಕೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮಹಿಳೆ ತಾನು ಹೂಡಿಕೆ ಮಾಡಿದ ಬಂಡವಾಳವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ.
"ತಾನು ಹೂಡಿಕೆ ಮಾಡಿದ ಹಣ ವಾಪಸ್ ನೀಡುವಂತೆ ಮಹಿಳೆ ಕೇಳಿದಾಗ, ಆರೋಪಿಯು ಆಕೆಗೆ ಹಣ ನೀಡಲು ನಿರಾಕರಿಸಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 15 ರಂದು ಖಾನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4) (ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ಈ ಸಂಬಂಧ ಯಾರನ್ನೂ ಬಂಧಿಸಿಲ್ಲ.