ಭೋಪಾಲ್: ಕರ್ನಲ್ ಸೋಫಿಯಾ ಖುರೇಷಿ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸೋಮವಾರ ತಡರಾತ್ರಿ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಮಧ್ಯಪ್ರದೇಶ ಪೊಲೀಸರು ರಚಿಸಿದ್ದಾರೆ.
ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ‘ಭಯೋತ್ಪಾಕರ ಸಹೋದರಿ’ ಎಂದು ಕರೆದ ಮಧ್ಯಪ್ರದೇಶದ ಸಚಿವ ಕುನ್ವರ್ ವಿಜಯ್ ಷಾ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಹಾಗೂ ಈ ಕೂಡಲೇ ಈ ಪ್ರಕರಣದ ಅಡಿಯಲ್ಲಿ ತನಿಖೆ ಕೈಗೊಳ್ಳಲು ಎಸ್ಐಟಿ ರಚಿಸಿದೆ.
ಅದಕ್ಕೂ ಮೊದಲು ನ್ಯಾಯಾಲಯದ ಎದುರು ಪ್ರಕರಣಕ್ಕೆ ಕ್ಷಮೆ ಕೋರಿದ್ದ ಕುನ್ವರ್ ವಿಜಯ್ ಷಾಗೆ ನ್ಯಾಯಮೂರ್ತಿ ತೀವ್ರ ತರಾಟೆಗೆ ತೆಗೆದುಕೊಂಡರು. ನ್ಯಾಯಾಲಯವು ಶಾ ಅವರ ಕ್ಷಮೆಯಾಚನೆಯನ್ನು ತಿರಸ್ಕರಿಸಿತು ಮತ್ತು “ನಿಮ್ಮದು ಯಾವ ರೀತಿಯ ಕ್ಷಮೆಯಾಚನೆ?” ಎಂದು ಕೇಳಿತು.
ಇಂಥ ಹೇಳಿಕೆಯಿಂದ ಇಡೀ ದೇಶಕ್ಕೆ ನಾಚಿಕೆಯಾಗಿದೆ... ನೀವು ಕಾರ್ಯಕ್ರಮದಲ್ಲಿ ಮಾತನಾಡಿದ ವಿಡಿಯೊವನ್ನೂ ನೋಡಿದ್ದೇವೆ. ಅದ್ಯಾವ ಶಕ್ತಿ ನಿಮ್ಮನ್ನು ತಡೆಯಿತೊ ಗೊತ್ತಿಲ್ಲ. ನೀವು ಇನ್ನಷ್ಟು ಕೆಟ್ಟ ಮಾತು ಆಡಲು ನಿಮಗೆ ಪದಗಳೂ ಸಿಗದಿರಬಹುದು. ನಿಮಗೆ ನಾಚಿಕೆಯಾಗಬೇಕು’ ಎಂದು ಪೀಠ ಅಭಿಪ್ರಾಯಪಟ್ಟಿತ್ತು.
ವಿಶೇಷ ತನಿಖಾ ತಂಡದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಪ್ರಮೋದ್ ವರ್ಮಾ, ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಕಲ್ಯಾಣ್ ಚಕ್ರವರ್ತಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ವಾಹಿನಿ ಸಿಂಗ್ ಇದ್ದಾರೆ. ಮಧ್ಯಪ್ರದೇಶ ಹೈಕೋರ್ಟ್ ಆದೇಶದ ನಂತರ ದಾಖಲಾಗಿರುವ ಎಫ್‌ಐಆರ್ ತನಿಖೆಗೆ ಮಂಗಳವಾರ ಬೆಳಿಗ್ಗೆ 10 ಗಂಟೆಯೊಳಗೆ ಐಜಿ ಶ್ರೇಣಿಯ
ಅಧಿಕಾರಿಯ ನೇತೃತ್ವದಲ್ಲಿ ಮೂವರು ಸದಸ್ಯರ ಎಸ್‌ಐಟಿ ರಚಿಸಬೇಕು. ಈ ತಂಡದಲ್ಲಿ ಮಹಿಳಾ ಅಧಿಕಾರಿಯೂ ಇರಬೇಕು. ತಂಡವು ತನ್ನ ಮೊದಲ ವರದಿಯನ್ನು ಮೇ 28ರ ಒಳಗಾಗಿ ಸಲ್ಲಿಸಬೇಕು’ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಆದೇಶಿಸಿತ್ತು.