ನವದೆಹಲಿ: ಸಾಲು ಸಾಲು ಕೊಲೆಗಳನ್ನು ಮಾಡಿ ಮೃತದೇಹಗಳನ್ನು ಕತ್ತರಿಸಿ ಮೊಸಳೆಗೆ ಹಾಕುತ್ತಿದ್ದ ಖತರ್ನಾಕ್ ವೈದ್ಯನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ಸಾವಿನ ಭೀತಿ ಹುಟ್ಟಿಸಿದ್ದ Doctor Death ನನ್ನು ಬಂಧಿಸುವಲ್ಲಿ ಕೊನೆಗೂ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಕೊಲೆಗಳನ್ನು ಮಾಡಿ, ತನ್ನ ಸುಳಿವು ಸಿಗಬಾರದು ಎಂದು ಆ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಈತ ಮೊಸಳೆಗಳಿಗೆ ಆಹಾರವಾಗಿ ಹಾಕುತ್ತಿದ್ದ ಎನ್ನಲಾಗಿದೆ.
ತನ್ನ ಇಂತಹ ಕೃತ್ಯಗಳಿಂದಲೇ ಈತ 'ಡಾಕ್ಟರ್ ಡೆತ್' ಎಂದು ಕುಖ್ಯಾತಿ ಪಡೆದಿದ್ದ. ರಾಜಸ್ಥಾನದ ದೌಸಾದಲ್ಲಿರುವ ಆಶ್ರಮದಿಂದ ಆತನನ್ನು ಬಂಧಿಸಲಾಯಿತು. ಅಲ್ಲಿ ಆತ ಸುಳ್ಳು ಗುರುತಿನಡಿಯಲ್ಲಿ ಅರ್ಚಕರೆಂದು ಹೇಳಿಕೊಂಡು ಬದುಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೆರೋಲ್ ಮೇಲೆ ಬಿಡುಗಡೆಯಾಗಿದ್ದ 'ಡಾಕ್ಟರ್ ಡೆತ್'
ಇದೇ ವೇಳೆ ಕಳೆದ ವರ್ಷ ಪೆರೋಲ್ ನಿಂದ ತಪ್ಪಿಸಿಕೊಂಡಿದ್ದ ರಾಜಸ್ಥಾನದ ಈ ಡಾಕ್ಟರ್ ದೆಹಲಿ ಪೊಲೀಸರ ಕೈಗೆ ಸಿಕ್ಕಿದ್ದಾನೆ. 67 ವರ್ಷದ ಆಯುರ್ವೇದ ವೈದ್ಯ ದೇವೇಂದರ್ ಶರ್ಮಾ ಎಂಬ ಸೀರಿಯಲ್ ಕಿಲ್ಲರ್ ಬಹು ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದು, ಉತ್ತರ ಪ್ರದೇಶದ ಕಾಸ್ಗಂಜ್‌ನಲ್ಲಿರುವ ಹಜಾರ ಕಾಲುವೆಯ ಮೊಸಳೆ ತುಂಬಿದ ನೀರಿನಲ್ಲಿ ತಾನು ಕೊಂದವರ ದೇಹಗಳನ್ನು ಎಸೆಯುತ್ತಿದ್ದ. ಹೀಗಾಗಿ, ಆ ಶವಗಳ ಮಾಹಿತಿ ಪೊಲೀಸರಿಗೆ ಸಿಗುತ್ತಿರಲಿಲ್ಲ ಎನ್ನಲಾಗಿದೆ.
ಶರ್ಮ ಪೆರೋಲ್‌ನಲ್ಲಿದ್ದಾಗ ಪರಾರಿಯಾಗಿರುವುದು ಇದೇ ಮೊದಲಲ್ಲ. 2020ರಲ್ಲಿ 20 ದಿನಗಳ ಪೆರೋಲ್ ನಂತರ ಅವನು ಹಿಂತಿರುಗಿರಲಿಲ್ಲ. ದೆಹಲಿಯಲ್ಲಿ ಬಂಧಿಸಲ್ಪಡುವ ಮೊದಲು 7 ತಿಂಗಳುಗಳ ಕಾಲ ತಲೆಮರೆಸಿಕೊಂಡಿದ್ದ. ಜೂನ್ 2023ರಲ್ಲಿ ಅವನಿಗೆ ಎರಡು ತಿಂಗಳು ಪೆರೋಲ್ ನೀಡಲಾಯಿತು. ಆದರೆ ಆಗಸ್ಟ್ 3, 2023ರ ನಂತರ ನಾಪತ್ತೆಯಾಗಿದ್ದನು.
ಸೈಕೋ ಕಿಲ್ಲರ್
ದೇವೇಂದರ್ ಶರ್ಮ ತನ್ನ ಭೀಕರ ವಿಧಾನದ ಮೂಲಕ ಕೊಲೆ ಮಾಡುವ ಮೂಲಕ ಭಯ ಸೃಷ್ಟಿಸಿದ್ದ. ಆಗಾಗ ತಾನು ಕೊಂದವರ ದೇಹಗಳನ್ನು ಕಾಸ್ಗಂಜ್‌ನ ಮೊಸಳೆಗಳಿಂದ ತುಂಬಿದ ಕೆರೆಯಲ್ಲಿ ಎಸೆಯುತ್ತಿದ್ದ. ಸಾಕ್ಷ್ಯಗಳನ್ನು ನಾಶಮಾಡಲು ಆತ ಈ ವಿಧಾನ ಬಳಸುತ್ತಿದ್ದ. ದೆಹಲಿ, ರಾಜಸ್ಥಾನ ಮತ್ತು ಹರಿಯಾಣದಾದ್ಯಂತ 7 ಪ್ರತ್ಯೇಕ ಕೊಲೆ ಪ್ರಕರಣಗಳಿಗೆ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಈತ ಗುರುಗ್ರಾಮ್ ನ್ಯಾಯಾಲಯದಿಂದ ಮರಣದಂಡನೆಯನ್ನು ಸಹ ಪಡೆದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯಾರು ಈ 'ಡಾಕ್ಟರ್ ಡೆತ್'?
ಆಯುರ್ವೇದ ವೈದ್ಯ ದೇವೇಂದರ್ ಶರ್ಮಾ ಬಿಎಎಂಎಸ್ ಪದವಿಧರನಾಗಿದ್ದಾನೆ. 2002 ಮತ್ತು 2004ರ ನಡುವೆ ಟ್ಯಾಕ್ಸಿ ಮತ್ತು ಟ್ರಕ್ ಚಾಲಕರ ಕ್ರೂರ ಹತ್ಯೆಗಳಿಗಾಗಿ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ. ಹೈವೇಗಳಲ್ಲಿ ಡ್ರಾಪ್ ಕೇಳುವ ನೆಪದಲ್ಲಿ ಲಾರಿ ಮತ್ತು ಟ್ರಕ್ ಗಳನ್ನು ಹತ್ತಿಕೊಂಡು ಬಳಿಕ ಚಾಲಕರನ್ನೇ ಕೊಂದು ಹಾಕುತ್ತಿದ್ದ.
ಬಳಿಕ ಅವರ ವಾಹನಗಳನ್ನು ಬ್ಲಾಕ್ ಮಾರ್ಕೆಟ್ನಲ್ಲಿ ಮಾರಾಟ ಮಾಡುತ್ತಿದ್ದ. ದೇವೇಂದರ್ ಶರ್ಮ ವಿರುದ್ಧ ಇಂತಹ ಒಟ್ಟು 27 ಕೊಲೆ, ಅಪಹರಣ ಮತ್ತು ದರೋಡೆ ಪ್ರಕರಣಗಳು ದಾಖಲಾಗಿವೆ.
ಸರಣಿ ಹಂತಕನಾಗುವ ಮೊದಲು, ಅವನು 1998ರಿಂದ 2004ರವರೆಗೆ ಅಕ್ರಮ ಮೂತ್ರಪಿಂಡ ಕಸಿ ಜಾಲವನ್ನು ನಡೆಸುತ್ತಿದ್ದ. 125ಕ್ಕೂ ಹೆಚ್ಚು ಅಕ್ರಮ ಮೂತ್ರಪಿಂಡ ಕಸಿಗಳನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದ ಎನ್ನಲಾಗಿದೆ.