ನವದೆಹಲಿ: ಅಪರೂಪದ ವೈದ್ಯಕೀಯ ಪ್ರಕರಣವೊಂದರಲ್ಲಿ, ಒಂದು ಗಂಟೆ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ 70 ವರ್ಷದ ವ್ಯಕ್ತಿಯ ಪಿತ್ತಕೋಶದಿಂದ 8,125 ಕಲ್ಲುಗಳನ್ನು ಹೊರತೆಗೆಯಲಾಗಿದೆ.
ಗುರುಗ್ರಾಮ್‌ನ ಫೋರ್ಟಿಸ್ ಸ್ಮಾರಕ ಸಂಶೋಧನಾ ಸಂಸ್ಥೆಯಲ್ಲಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಕಲ್ಲುಗಳನ್ನು ಎಣಿಸಲು ತಂಡಕ್ಕೆ ಸುಮಾರು ಆರು ಗಂಟೆಗಳು ಬೇಕಾಯಿತು ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ. ರೋಗಿಯು ವರ್ಷಗಳಿಂದ ದೀರ್ಘಕಾಲದ ಹೊಟ್ಟೆ ನೋವು, ಆಗಾಗ ಜ್ವರ, ಹಸಿವಿನ ಕೊರತೆ, ಎದೆ ಮತ್ತು ಬೆನ್ನಿನಲ್ಲಿ ಭಾರವಾಗುವಿಕೆ ತೊಂದರೆ ಅನುಭವಿಸುತ್ತಿದ್ದರು.
ಕೊಲೆಸ್ಟ್ರಾಲ್ ಸಮಸ್ಯೆಯಿಂದ ಪಿತ್ತಕಲ್ಲು ರೂಪುಗೊಂಡು ಕಾಲಾನಂತರದಲ್ಲಿ ಹೆಚ್ಚುತ್ತಾ ಹೋಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಮೇ 12 ರಂದು ರೋಗಿಯು ಲ್ಯಾಪರೊಸ್ಕೋಪಿಕ್ ಪಿತ್ತಕೋಶ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಇದೊಂದು ಅಪರೂಪದ ಪ್ರಕರಣ. ಹಾಗೆಂದು ವಿಶೇಷವೇನಲ್ಲ. ವರ್ಷಗಟ್ಟಲೆ ಮುಂದೂಡಿದರೆ ಮತ್ತಷ್ಟು ಕಲ್ಲು ಹೊಟ್ಟೆಯಲ್ಲಿ ಶೇಖರವಾಗುತ್ತದೆ. ಚಿಕಿತ್ಸೆ ಮತ್ತಷ್ಟು ವಿಳಂಬವಾಗಿದ್ದರೆ ಇದು ಗಂಭೀರ ತೊಡಕುಗಳಿಗೆ ಕಾರಣವಾಗುತ್ತಿತ್ತು ಎಂದು ಶಸ್ತ್ರಚಿಕಿತ್ಸೆ ಮಾಡಿದ ತಂಡದ ಭಾಗವಾಗಿದ್ದ ಜಠರಗರುಳಿನ ಆಂಕೊಲಾಜಿ ನಿರ್ದೇಶಕ ಅಮಿತ್ ಜಾವೇದ್ ಹೇಳಿದರು.
ಎರಡು ದಿನಗಳ ನಂತರ ರೋಗಿಯನ್ನು ಬಿಡುಗಡೆ ಮಾಡಲಾಯಿತು. ರೋಗಿಯು ಆರಂಭದಲ್ಲಿ ಚಿಕಿತ್ಸೆಗೆ ಹಿಂದೇಟು ಹಾಕಿದ್ದರು. ಆದರೆ ನಂತರ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ಅಲ್ಟ್ರಾಸೌಂಡ್ ಮಾಡಿ ಪಿತ್ತಕೋಶ ಪರೀಕ್ಷೆ ಮಾಡಲಾಯಿತು. ಆಗ ತುರ್ತು ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ಸಲಹೆ ನೀಡಿದರು.
ಇಂತಹ ತೀವ್ರತರವಾದ ಸಂದರ್ಭಗಳಲ್ಲಿ, ಕಲ್ಲುಗಳು ಪಿತ್ತಕೋಶದೊಳಗೆ ಕೀವು ರಚನೆ, ಪಿತ್ತಕೋಶದ ಗೋಡೆ ದಪ್ಪವಾಗುವುದು ಮತ್ತು ಫೈಬ್ರೋಸಿಸ್ ಮತ್ತು ಪಿತ್ತಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.