ಕಾನ್ಪುರ: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದ ಶುಭಂ ದ್ವಿವೇದಿ ಅವರ ಕುಟುಂಬವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಕೇರಿ ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಲಿದ್ದಾರೆ.
ಪ್ರಧಾನಿ ಮೋದಿ ಅವರು ಚಕೇರಿ ವಿಮಾನ ನಿಲ್ದಾಣದಲ್ಲಿ ಶುಭಂ ಅವರ ಪತ್ನಿ ಅಶಾನ್ಯಾ ಮತ್ತು ಅವರ ಪೋಷಕರಾದ ಸಂಜಯ್ ದ್ವಿವೇದಿ ಮತ್ತು ಸೀಮಾ ದ್ವಿವೇದಿ ಅವರನ್ನು ಭೇಟಿ ಮಾಡುವ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿಸಲಾಗಿದೆ ಎಂದು ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿತೇಂದ್ರ ಪ್ರತಾಪ್ ಸಿಂಗ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ 26 ಜನರಲ್ಲಿ ಉದ್ಯಮಿ ಶುಭಂ ದ್ವಿವೇದಿ (31ವ) ಕೂಡ ಒಬ್ಬರು.
ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಪ್ರಧಾನಿ ಕಾರ್ಯಾಲಯದ ನಿರ್ಧಾರದ ಬಗ್ಗೆ ತಮಗೆ ಮಾಹಿತಿ ನೀಡಿದ್ದಾರೆ ಎಂದು ಅವರ ಪತ್ನಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಒಂದು ವಾರದ ಹಿಂದೆ, ಕಾನ್ಪುರ ಲೋಕಸಭಾ ಸಂಸದ ರಮೇಶ್ ಅವಸ್ಥಿ ಅವರು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದು ಶುಭಂ ದ್ವಿವೇದಿ ಅವರ ಕುಟುಂಬವನ್ನು ಭೇಟಿ ಮಾಡುವಂತೆ ಪ್ರಧಾನಿ ಮೋದಿ ಅವರನ್ನು ವಿನಂತಿಸಿದ್ದರು.
"ಆಪರೇಷನ್ ಸಿಂಧೂರ್ ಶುಭಂ ದ್ವಿವೇದಿ ಅವರ ಆತ್ಮಕ್ಕೆ ಶಾಂತಿ ತಂದಿದೆ. ಅದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳಲು ಅವರ ಕುಟುಂಬಸ್ಥರು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಅವಸ್ತಿ ಪತ್ರದಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಮೇ 7 ರ ಆರಂಭದಲ್ಲಿ ಆಪರೇಷನ್ ಸಿಂದೂರನ್ನು ಪ್ರಾರಂಭಿಸಲಾಯಿತು. ಪಾಕಿಸ್ತಾನಿ ದಾಳಿಗಳಿಗೆ ನಂತರದ ಎಲ್ಲಾ ಪ್ರತೀಕಾರಗಳನ್ನು ಈ ಕಾರ್ಯಾಚರಣೆಯ ಅಡಿಯಲ್ಲಿ ನಡೆಸಲಾಯಿತು.
ಈ ವರ್ಷ ಫೆಬ್ರವರಿ 12 ರಂದು ವಿವಾಹವಾಗಿದ್ದ ಶುಭಂ, ತನ್ನ ಪತ್ನಿ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಪಹಲ್ಗಾಮ್‌ಗೆ ಭೇಟಿ ನೀಡಿದ್ದ ವೇಳೆ ಭಯೋತ್ಪಾದಕರು ಹಾರಿಸಿದ ಗುಂಡಿನ ದಾಳಿಗೆ ಪ್ರಾಣ ಕಳೆದುಕೊಂಡಿದ್ದರು.