ಕೊಯಮತ್ತೂರು: ಕೊಯಮತ್ತೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಭಾನುವಾರ ತಡರಾತ್ರಿ ಮೂವರು ವ್ಯಕ್ತಿಗಳು ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸರ ಪ್ರಕಾರ, ಮೂಲತಃ ಮಧುರೈನ ಯುವತಿ ಮತ್ತು ಪ್ರಸ್ತುತ ಕೊಯಮತ್ತೂರಿನಲ್ಲಿ ಓದುತ್ತಿರು ವಿದ್ಯಾರ್ಥಿನಿಯನ್ನು ವಿಮಾನ ನಿಲ್ದಾಣದ ಬಳಿಯ ಬೃಂದಾವನ ನಗರದಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಕಾರಿನಲ್ಲಿ ಕುಳಿತಿದ್ದಾಗ ಅಪಹರಿಸಲಾಗಿದೆ. ಮೂವರು ದುಷ್ಕರ್ಮಿಗಳು ಯುವತಿ ಕುಳಿತಿದ್ದ ಕಾರಿನ ಬಳಿ ಬಂದು, ಆಕೆಯ ಸ್ನೇಹಿತಿನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ಅಪಹರಿಸಿದ್ದಾರೆ.
ನಂತರ ಹಲ್ಲೆಕೋರರು ಸಂತ್ರಸ್ತೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದಾರೆ. ಗಾಯಗೊಂಡು, ಪ್ರಜ್ಞೆ ತಪ್ಪಿದ್ದ ಆಕೆಯ ಸ್ನೇಹಿತ ಸ್ವಲ್ಪ ಸಮಯದ ನಂತರ ಪ್ರಜ್ಞೆ ಮರಳಿದ ಬಳಿಕ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದಾಗ ಮಹಿಳೆ ಪ್ರಜ್ಞಾಹೀನಳಾಗಿ ಮತ್ತು ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಂತರ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಂಭೀರವಾಗಿ ಗಾಯಗೊಂಡ ಆಕೆಯ ಸ್ನೇಹಿತನನ್ನು ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ(CMCH) ದಾಖಲಿಸಲಾಗಿದೆ.
ಕೊಯಮತ್ತೂರು ನಗರ ಪೊಲೀಸ್ ಆಯುಕ್ತರು, ಅಪರಾಧಿಗಳನ್ನು ಪತ್ತೆಹಚ್ಚಲು ಉಪ ಪೊಲೀಸ್ ಆಯುಕ್ತ (ಉತ್ತರ)ಎನ್ ದೇವನಾಥನ್ ನೇತೃತ್ವದಲ್ಲಿ ಏಳು ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಸೋಮವಾರ ಬೆಳಗ್ಗೆ ವಿಧಿವಿಜ್ಞಾನ ತಜ್ಞರು ಅಪರಾಧ ಸ್ಥಳಕ್ಕೆ ಭೇಟಿ ನೀಡಿ, ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.