ಬೆಂಗಳೂರು: ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆ 33 ವರ್ಷದ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ. ದೊಮ್ಮಲೂರು 2ನೇ ಹಂತದಲ್ಲಿ ಬೆಳಿಗ್ಗೆ 11.55 ರಿಂದ 11.57 ರ ನಡುವೆ ಸಂತ್ರಸ್ತೆ ತನ್ನ ನಾಯಿಯನ್ನು ವಾಕ್ ಮಾಡಿಸಿಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಯಾರೋ 'ಮೇಡಂ' ಎಂದು ಕರೆಯುತ್ತಿರುವುದು ಕೇಳಿಸಿತು. ತಿರುಗಿ ನೋಡಿದಾಗ, ಆ ವ್ಯಕ್ತಿ ತನ್ನತ್ತ ನೋಡುತ್ತ, ಅಶ್ಲೀಲವಾಗಿ ನಡೆದುಕೊಂಡ ಎಂದು ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು 30 ವರ್ಷ ವಯಸ್ಸಿನ ಆರೋಪಿ ಕಂದು ಬಣ್ಣದ ಟಿ ಶರ್ಟ್ ಮತ್ತು ಬೂದು ಬಣ್ಣದ ಶಾರ್ಟ್ಸ್ ಧರಿಸಿದ್ದ. ಆಘಾತಕ್ಕೊಳಗಾಗಿ ನಿಂತಿದ್ದರೂ ಆರೋಪಿ ಅಶ್ಲೀಲ ಕೃತ್ಯವನ್ನು ಮುಂದುವರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ನಂತರ ಸಂತ್ರಸ್ತೆ 100 ಅಡಿ ರಸ್ತೆಯಲ್ಲಿರುವ ತನ್ನ ಫ್ಲಾಟ್‌ಗೆ ಹಿಂತಿರುಗಿ ತನ್ನ ಸಹೋದರಿಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಆಕೆಯ ಮತ್ತೊಬ್ಬ ಸ್ನೇಹಿತೆಗೂ ಮಾಹಿತಿ ನೀಡಿದ್ದಾಳೆ ಮತ್ತು ಭಾನುವಾರ ದೂರು ದಾಖಲಿಸಿದ್ದಾರೆ.
ಆರೋಪಿಯ ಸುಳಿವು ಪಡೆಯಲು ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಇಂದಿರಾನಗರ ಪೊಲೀಸರು ಬಿಎನ್‌ಎಸ್ ಸೆಕ್ಷನ್ 75 ರ ಅಡಿಯಲ್ಲಿ ಲೈಂಗಿಕ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.