ಗಯಾ: ಚುನಾವಣಾ ಅಭ್ಯರ್ಥಿಯೊಬ್ಬರ ಪ್ರಚಾರ ವಾಹನದಲ್ಲಿದ್ದ ಸುಮಾರು 17 ಮದ್ಯದ ಬಾಕ್ಸ್ ಗಳನ್ನು ಗ್ರಾಮಸ್ಥರು ಹೊತ್ತೊಯ್ದ ವಿಡಿಯೊ ವ್ಯಾಪಕ ವೈರಲ್ ಆಗುತ್ತಿದೆ.
ಬಿಹಾರ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು ಮತದಾರರ ಓಲೈಸಲು ರಾಜಕೀಯ ಪಕ್ಷಗಳು ನಾನಾ ಕಸರತ್ತು ಮಾಡುತ್ತಿವೆ. ಮದ್ಯಪಾನ ನಿಷೇಧವಾಗಿರುವ ಬಿಹಾರದಲ್ಲಿ ಮತದಾರರ ಒಲಿಸಿಕೊಳ್ಳಲು ಮದ್ಯದ ಬಾಟಲಿಗಳನ್ನುಹಂಚಲಾಗುತ್ತಿದೆ. ಇದೇ ರೀತಿ ಮತದಾರರಿಗೆ ಹಂಚಲು ತರಲಾಗಿದ್ದ ಮದ್ಯದ ಬಾಟಲಿಗಳನ್ನು ಗ್ರಾಮಸ್ಥರು ಲೂಟಿ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಗಯಾ ಜಿಲ್ಲೆಯ ಗುರಾರು ಪೊಲೀಸ್ ಠಾಣೆ ಪ್ರದೇಶದ ರೌನಾ ರೈಲ್ವೆ ಕ್ರಾಸಿಂಗ್ ಬಳಿ ಮಂಗಳವಾರ ಬೆಳಿಗ್ಗೆ ಎನ್‌ಡಿಎ ಬೆಂಬಲಿತ ಎಚ್‌ಎಎಂ ಅಭ್ಯರ್ಥಿ ದೀಪಾ ಮಾಂಝಿ ಅವರ ಪ್ರಚಾರ ವಾಹನದಿಂದ ಅಪಾರ ಪ್ರಮಾಣದ ಮದ್ಯ ಬಾಟಲಿಗಳು ಪತ್ತೆಯಾಗಿದೆ.
ಆದರೆ ಇದಕ್ಕೂ ಮೊದಲೇ ಗ್ರಾಮಸ್ಥರು ವಾಹನದಲ್ಲಿದ್ದ ಮದ್ಯದ ಬಾಟಲಿಗಳನ್ನು ಹೊತ್ಯೊಯ್ದಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವಾಹನದಲ್ಲಿದ್ದ ಬಾಕಿ 17 ಮದ್ಯದ ಪೆಟ್ಟಿಗೆಗಳನ್ನು ವಶಪಡಿಸಿಕೊಂಡು, ವಾಹನವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಸ್ಥಳೀಯ ವ್ಯಕ್ತಿಗೆ ವಾಹನ ಢಿಕ್ಕಿ
ವರದಿಗಳ ಪ್ರಕಾರ, ಬೆಳಿಗ್ಗೆ 8 ಗಂಟೆ ಸುಮಾರಿಗೆ, ದೀಪಾ ಮಾಂಝಿ ಅವರ ಪ್ರಚಾರ ವಾಹನವಾಗಿ ಬಳಸಲಾಗುತ್ತಿದ್ದ ಪಿಕಪ್ ಟ್ರಕ್ ಮೋಟಾರ್‌ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಘಟನೆಯ ನಂತರ, ಸ್ಥಳೀಯ ನಿವಾಸಿಗಳು ಮತ್ತು ವಾಹನದಲ್ಲಿದ್ದವರ ನಡುವೆ ವಾಗ್ವಾದ ನಡೆಯಿತು.
ಸ್ಥಳದಲ್ಲಿ ಜನಸಮೂಹ ಬೇಗನೆ ಜಮಾಯಿಸಿ ಜನರು ವಾಹನವನ್ನು ಪರಿಶೀಲಿಸಿದಾಗ, ಪ್ಲಾಸ್ಟಿಕ್‌ನಿಂದ ಮುಚ್ಚಿದ ಮದ್ಯದ ಪೆಟ್ಟಿಗೆಗಳು ಕಂಡುಬಂದವು. ಜನರು ಜಮಾಯಿಸುತ್ತಿದ್ದಂತೆಯೇ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಈ ವೇಳೆ ಜನರು ವಾಹನದಲ್ಲಿದ್ದ ಮದ್ಯದ ಬಾಕ್ಸ್ ಗಳನ್ನು ಲೂಟಿ ಮಾಡಿದ್ದಾರೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಪೊಲೀಸ್ ಠಾಣಾಧಿಕಾರಿ ದೌಡು
ವಾಹನವು ಎನ್‌ಡಿಎ ಬೆಂಬಲಿತ ಇಮಾಮ್‌ಗಂಜ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ದೀಪಾ ಮಾಂಝಿ ಅವರ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳನ್ನು ಹೊಂದಿತ್ತು. ಅದರಲ್ಲಿ ಮದ್ಯ ಸಾಗಣೆ ಮಾಡಲಾಗುತ್ತಿತ್ತು ಎಂದು ವರದಿಯಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಗುರಾರು ಠಾಣಾಧಿಕಾರಿ ಅಖಿಲೇಶ್ ಕುಮಾರ್ ಪೊಲೀಸ್ ಪಡೆಯೊಂದಿಗೆ ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಪರಿಶೀಲನೆ ನಡೆಸಿದಾಗ ಪ್ರಚಾರ ವಾಹನದಲ್ಲಿ ಒಟ್ಟು 17 ಮದ್ಯದ ಪೆಟ್ಟಿಗೆಗಳು ಪತ್ತೆಯಾಗಿವೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.
ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ವಾಹನವನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತನಿಖೆ ಪೂರ್ಣಗೊಂಡ ನಂತರ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಫ್‌ಐಆರ್ ದಾಖಲು
ಪ್ರಚಾರ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಪರಿಶೀಲನೆಯ ನಂತರ, ಎಫ್‌ಐಆರ್ ದಾಖಲಿಸಲಾಗುವುದು ಮತ್ತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗುರಾರು ಠಾಣಾಧಿಕಾರಿ ದೂರವಾಣಿಯಲ್ಲಿ ತಿಳಿಸಿದ್ದಾರೆ.
ಈ ವಿಷಯದಲ್ಲಿ ಮಾಲೀಕರು, ಚಾಲಕ ಮತ್ತು ಅಭ್ಯರ್ಥಿಯ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದ್ದಾರೆ. ಮಾಹಿತಿಯ ಪ್ರಕಾರ, ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಪಕ್ಷಕ್ಕೆ ಸೇರಿದ ಪ್ರಚಾರ ವಾಹನ ಇದಾಗಿದ್ದು, ಪ್ರಸ್ತುತ ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.