ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವದಂತಿ ಕುರಿತು ಜೋರಾಗಿ ಚರ್ಚೆ ನಡೆಯುತ್ತಿರುವಂತೆಯೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ದೆಹಲಿಗೆ ಆಗಮಿಸಿದ್ದು, ರಾಜ್ಯದ ಜಲವಿವಾದಗಳ ಕುರಿತು ವಕೀಲರೊಂದಿಗೆ ಚರ್ಚೆ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಡಿಕೆ ಶಿವಕುಮಾರ್, ಮೇಕೆದಾಟು ಸೇರಿದಂತೆ ಸುಪ್ರೀಂಕೋರ್ಟ್ ಅಲ್ಲಿ ಬಾಕಿಯಿರುವ ಕರ್ನಾಟಕದ ಜಲ ವಿವಾದಗಳ ಕುರಿತು ಕರ್ನಾಟಕದ ಪರ ವಾದಿಸುತ್ತಿರುವ ಹಿರಿಯ ವಕೀಲರಾದ ಮೋಹನ್ ವಿ ಕಾತರಾಕಿ, ನಿಶಾಂತ್ ಪಾಟೀಲ್, ರಾಜ್ಯದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹಾಗೂ ನನ್ನ ತಾಂತ್ರಿಕ ಸಲಹೆಗಾರರಾದ ಜೈಪ್ರಕಾಶ್ ಜೊತೆಗೆ ದೆಹಲಿಯ ಕರ್ನಾಟಕ ಭವನದಲ್ಲಿ ಚರ್ಚೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡುವ ಯಾವುದೇ ಯೋಜನೆ ಇಲ್ಲ. ಏಕೆಂದರೆ ಅವರೆಲ್ಲರೂ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯನಿರತರಾಗಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವದಂತಿಗಳ ನಡುವೆ ಪಕ್ಷದ ವರಿಷ್ಠರನ್ನು ಭೇಟಿಯಾಗಲು ಶಿವಕುಮಾರ್ ದೆಹಲಿಗೆ ಬಂದಿದ್ದಾರೆ ಎಂಬ ಊಹಾಪೋಹವಿತ್ತು.
"ಅಂತರ್ ರಾಜ್ಯ ಜಲ ವಿವಾದಗಳ ಬಗ್ಗೆ ಚರ್ಚಿಸಲು, ವಕೀಲರನ್ನು ಭೇಟಿ ಮಾಡಲು ಬಂದಿದ್ದೇನೆ. ಮೇಕೆದಾಟು ಮತ್ತು ಕೃಷ್ಣಾ ಜಲ ವಿವಾದ ವಿಷಯಗಳ ಕುರಿತು ನಾನು ಅವರೊಂದಿಗೆ ಸಭೆ ನಡೆಸಿದ್ದು, ಕೆಲವು ಸಲಹೆಗಳನ್ನು ನೀಡಿದ್ದೇನೆ. ನಮ್ಮ ಲೋಕಸಭಾ ಸದಸ್ಯರು ಬಹುತೇಕ ಬಿಜೆಪಿ ನಾಯಕರು ಬಾಕಿ ಇರುವ ನೀರಾವರಿ ವಿವಾದಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಬೇಕು. ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಹೇಳಿದರು.
ಮೇಕೆದಾಟು ಯೋಜನೆ ಸಂಬಂಧ ವಿನಾ ಕಾರಣ ಸಮಯಾವಕಾಶದ ನೆಪದಲ್ಲಿ ವಿಚಾರಣೆ ಮುಂದೂಡಿಕೊಂಡೇ ಹೋಗಲಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದ್ದೇನೆ. ನ್ಯಾಯಾಲಯದಲ್ಲಿ ವಿಶೇಷ ಪೀಠ ರಚನೆಗೆ ಮುಂದಾಗಿದ್ದು, ಈಗ ಸಮಯ ವ್ಯರ್ಥ ಮಾಡಬಾರದು ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಕರ್ನಾಟಕ ಹಾಲು ಒಕ್ಕೂಟ (KMF)ತುಪ್ಪದ ಬೆಲೆ ಏರಿಕೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ರೈತರ ಅನುಕೂಲಕ್ಕಾಗಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಂತಿಮವಾಗಿ ರೈತರು ಇದರ ಲಾಭ ಪಡೆಯಬೇಕೆಂದು ನಾವು ಬಯಸುತ್ತೇವೆ" ಎಂದು ಅವರು ಹೇಳಿದರು.