ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ಈವರೆಗೂ ಶೇ.43ರಷ್ಟು ಮತದಾನವಾಗಿದೆ.
121 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು 3.75 ಕೋಟಿ ಮತದಾರರು 1314 ಅಭ್ಯರ್ಥಿಗಳ ಹಣೆಬರಹವನ್ನು ತೀರ್ಮಾನಿಸಲಿದ್ದಾರೆ.
ಚುನಾವಣಾ ಕಣದಲ್ಲಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ, ಆರ್'ಜೆಡಿ ನಾಯಕ, ವಿಪಕ್ಷ ನಾಯಕ ತೇಜಸ್ವಿ ಯಾದವ್, ಲಾಲು ಹಿರಿಯ ಮಗ, ಜನಶಕ್ತಿ ಜನತಾದಳದ ನಾಯಕ ತೇಜ್ ಪ್ರತಾಪ್ ಯಾದವ್ ಇದ್ದಾರೆ. ಮೊದಲ ಹಂತದ ಅಭ್ಯರ್ಥಿಗಳ ಪೈಕಿ ಶೇ.36ರ ಮಂದಿ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ.
ಸತತ ಮೂರನೇ ಗೆಲುವು ಸಾಧಿಸಲು ಬಯಸುತ್ತಿರುವ ತೇಜಸ್ವಿ ಯಾದವ್ ಅವರು, ಬಿಜೆಪಿಯ ಸತೀಶ್ ಕುಮಾರ್ ಅವರ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ. ಅವರ ಹಿರಿಯ ಸಹೋದರ ತೇಜ್ ಪ್ರತಾಪ್ ಯಾದವ್ ತಮ್ಮ ಹೊಸ ಪಕ್ಷವಾದ ಜನಶಕ್ತಿ ಜನತಾ ದಳದ ಅಡಿಯಲ್ಲಿ ಮಹುವಾದಿಂದ ಆರ್‌ಜೆಡಿಯ ಮುಖೇಶ್ ರೌಶನ್ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ.
ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಲಖಿಸರೈನಲ್ಲಿ ಸತತ ನಾಲ್ಕನೇ ಗೆಲುವಿನತ್ತ ಕಣ್ಣಿಟ್ಟಿದ್ದರೆ, ಬಿಜೆಪಿಯ ಮಂಗಲ್ ಪಾಂಡೆ ಸಿವಾನ್‌ನಿಂದ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದಾರೆ.
ಚುನಾವಣೆಯಲ್ಲಿ ಗಾಯಕಿ ಮೈಥಿಲಿ ಠಾಕೂರ್ ಮತ್ತು ಭೋಜ್‌ಪುರಿ ನಟ ಖೇಸರಿ ಲಾಲ್ ಯಾದವ್ ಅವರಂತಹ ಹೊಸ ಅಭ್ಯರ್ಥಿಗಳೂ ಸ್ಪರ್ಧೆಗಿಳಿದಿದ್ದಾರೆ.
ಮತದಾನ ಪ್ರಕ್ರಿಯೆ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು, ನ.11ರಂದು 2ನೇ ಹಂತದ ಮತದಾನ ನಡೆಯಲಿದೆ. ಬಳಿಕ ನ.14ರಂದು ಮತ ಎಣಿಕೆ ನಡೆಯಲಿದೆ.
ಚುನಾವಣಾ ಆಯೋಗ ನೀಡಿರುವ ಮಾಹಿತಿಗಳ ಪ್ರಕಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ.42.31ರಷ್ಟು ಮತದಾನ ದಾಖಲಾಗಿದ್ದು, ಸಹರ್ಸಾದಲ್ಲಿ ಅತಿ ಹೆಚ್ಚು, ಲಖಿಸರೈನಲ್ಲಿ ಕಡಿಮೆ ಮತದಾನ ದಾಖಲಾಗಿದೆ ಎಂದು ತಿಳಿದುಬದಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಸಹರ್ಸಾದಲ್ಲಿ ಶೇ. 15.27 ರಷ್ಟು ಅತಿ ಹೆಚ್ಚು ಮತದಾನ ದಾಖಲಾಗಿದ್ದರೆ, ಲಖಿಸರೈನಲ್ಲಿ ಶೇ. 7 ರಷ್ಟು ಕಡಿಮೆ ಮತದಾನ ದಾಖಲಾಗಿದೆ ಎಂದು ತಿಳಿದುಬಂದಿದೆ.
ಬಿಹಾರ ರಾಜಧಾನಿ ಪಾಟ್ನಾದಲ್ಲಿ ಬೆಳಿಗ್ಗೆ 9 ಗಂಟೆಯ ವೇಳೆಗೆ ಮತದಾರರ ಭಾಗವಹಿಸುವಿಕೆ ಅತ್ಯಂತ ಕಡಿಮೆಯಾಗಿದ್ದು, ಈವರೆಗೂ ಶೇ.11.22 ರಷ್ಟು ಮತದಾನ ದಾಖಲಾಗಿದೆ.
'ಅವಕಾಶವಾದಿ ಆಡಳಿತಗಾರರಿಗೆ' ಪಾಠ ಕಲಿಸಲು ಸುವರ್ಣ ಅವಕಾಶ: ಖರ್ಗೆ
ಏತನ್ಮಧ್ಯೆ, ಬದಲಾವಣೆಗಾಗಿ ನಿರ್ಣಾಯಕ ಮತ ಚಲಾಯಿಸುವಂತೆ ಬಿಹಾರ ಜನತೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ಪ್ರಜಾಪ್ರಭುತ್ವದ ಜನ್ಮಸ್ಥಳವಾದ ಬಿಹಾರವು ತನ್ನ ಯುವಕರ ಭವಿಷ್ಯವನ್ನು ಭದ್ರಪಡಿಸುವ ಮತ್ತು ಅವರನ್ನು ನಿರುದ್ಯೋಗ ಮತ್ತು ವಲಸೆಯಿಂದ ಮುಕ್ತಗೊಳಿಸುವ ಸರ್ಕಾರವನ್ನು ಆಯ್ಕೆ ಮಾಡಬೇಕಿದೆ. ದಲಿತರು, ಆದಿವಾಸಿಗಳು, ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳು, ಆರ್ಥಿಕವಾಗಿ ದುರ್ಬಲ ವರ್ಗಗಳು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗಕ್ಕೂ ಸಮಾನ ಹಕ್ಕುಗಳು ಮತ್ತು ಅವಕಾಶಗಳು ಇರಬೇಕು.
ರಾಷ್ಟ್ರದ ಪ್ರಗತಿಗೆ ಬಿಹಾರದ ಕೊಡುಗೆಯನ್ನು ಹೆಚ್ಚಿಸುವ ಸಾಮಾಜಿಕ ನ್ಯಾಯದ ಹೊಸ ವ್ಯಾಖ್ಯಾನವನ್ನು ನಾವು ರಚಿಸಬೇಕು. ಬದಲಾವಣೆಗಾಗಿ ಮತ ಚಲಾಯಿಸುವ" ಅವಕಾಶವನ್ನು ಕಳೆದುಕೊಳ್ಳಬೇಡಿ. ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇತರರನ್ನು ಪ್ರೇರೇಪಿಸಿ. ಈ ಅವಕಾಶವನ್ನು ಕಳೆದುಕೊಳ್ಳಲು ಬಿಡಬೇಡಿ. ಹೊರಗೆ ಹೋಗಿ ಮತ ಚಲಾಯಿಸಿ. ನಿಮ್ಮ ಸ್ನೇಹಿತರು ಮತ್ತು ಕುಟುಂಬದವರನ್ನೂ ಮತಚಲಾಯಿಸಲು ಪ್ರೋತ್ಸಾಹಿಸಿ. ಜೈ ಹಿಂದ್, ಜೈ ಬಿಹಾರ ಎಂದು ಹೇಳಿದ್ದಾರೆ.
ಈ ನಡುವೆ ತಮ್ಮ ಮತಹಕ್ಕು ಚಲಾಯಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಯಾದವ್ ಅವರು, ಬಿಹಾರದ ಜನರು ತಮ್ಮ ವರ್ತಮಾನ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ. ಉದ್ಯೋಗ, ಶಿಕ್ಷಣ, ಉತ್ತಮ ಆರೋಗ್ಯ ರಕ್ಷಣೆಗಾಗಿ ಮತ ಚಲಾಯಿಸಿ... ನಮ್ಮ ಗೆಲುವು ಖಚಿತ, ಬಿಹಾರದಲ್ಲಿ ಗೆಲವು ಸಾಧಿಸುತ್ತೇವೆ. ನವೆಂಬರ್ 14 ರಂದು ಹೊಸ ಸರ್ಕಾರ ರಚನೆಯಾಗಲಿದೆ ಎಂದು ತಿಳಿಸಿದ್ದಾರೆ.
'ಜಂಗಲ್ ರಾಜ್' ಮರಳುವುದನ್ನು ತಡೆಯಲು ಮತದಾನ ಮಾಡಿ: ಅಮಿತ್ ಶಾ
ಬಿಹಾರದ ಮತದಾರರೇ, ಸಹೋದರ ಸಹೋದರಿಯರೇ, ವಿಶೇಷವಾಗಿ ಯುವಕರೇ, ಇಂದಿನ ಮೊದಲ ಹಂತದ ಮತದಾನದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನಿಮ್ಮ ಪ್ರತಿಯೊಂದು ಮತವು ಬಿಹಾರದಲ್ಲಿ ಜಂಗಲ್ ರಾಜ್ ಮರಳುವುದನ್ನು ತಡೆಯಲು, ಉತ್ತಮ ಆಡಳಿತವನ್ನು ಉಳಿಸಿಕೊಳ್ಳಲು ಮತ್ತು ಅಭಿವೃದ್ಧಿ ಹೊಂದಿದ, ಸ್ವಾವಲಂಬಿ ಬಿಹಾರವನ್ನು ನಿರ್ಮಿಸಲು ದಾರಿ ಮಾಡಿಕೊಡುತ್ತದೆ. ನುಸುಳುಕೋರರು ಮತ್ತು ನಕ್ಸಲೀಯರಿಗೆ ರಕ್ಷಣೆ ನೀಡುವ ಮೂಲಕ ದೇಶದ ಭದ್ರತೆಯೊಂದಿಗೆ ಆಟವಾಡುವವರಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಿ ಎಂದು ಅಮಿತ್ ಶಾ ಅವರು ಹೇಳಿದ್ದಾರೆ.
ನಿಮ್ಮ ಮತವು ಬಿಹಾರದ ಹೆಮ್ಮೆಯನ್ನು ಪುನಃಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ, ಜೊತೆಗೆ ರಾಜ್ಯದ ಪ್ರತಿಯೊಬ್ಬ ನಿವಾಸಿಗೆ ಆಧುನಿಕ ಶಿಕ್ಷಣ, ಬಡವರಿಗೆ ಕಲ್ಯಾಣ ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಎಂದು ತಿಳಿಸಿದ್ದಾರೆ.