ಗುವಾಹಟಿ: ಸಿಂಗಾಪುರದಲ್ಲಿ ಖ್ಯಾತ ಗಾಯಕ ಜುಬೀನ್ ಗಾರ್ಗ್ ಸಾವಿನ ಪ್ರಕರಣದಲ್ಲಿ ತಮ್ಮ ಸಹೋದರ ಶ್ಯಾಮಕಾನು ಮಹಾಂತ ಅವರನ್ನು ಬಂಧಿಸಿದ ನಂತರ ಅಸ್ಸಾಂ ಮುಖ್ಯ ಮಾಹಿತಿ ಆಯುಕ್ತ(ಸಿಐಸಿ) ಭಾಸ್ಕರ್ ಜ್ಯೋತಿ ಮಹಾಂತ ಅವರು ಗುರುವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಸಲಹೆಯ ಮೇರೆಗೆ ಭಾಸ್ಕರ್ ಜ್ಯೋತಿ ಮಹಾಂತ ಅವರು ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಸಂಗೀತ ದಿಗ್ಗಜ ಜುಬೀನ್ ಗಾರ್ಗ್ ಅವರ ನಿಗೂಢ ಸಾವಿನ ಪ್ರಕರಣದಲ್ಲಿ ಮಹಂತ ಅವರ ಸಹೋದರ ಶ್ಯಾಮಕಾನು ಮಹಾಂತ ಅವರನ್ನು ಇತರ ಆರು ಜನರೊಂದಿಗೆ ಬಂಧಿಸಲಾಗಿದ್ದು, ಹಲವಾರು ಆರ್‌ಟಿಐ ಅರ್ಜಿಗಳು ಸಲ್ಲಿಕೆಯಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸೆಪ್ಟೆಂಬರ್ 19 ರಂದು ಶ್ಯಾಮಕಾನು ಆಯೋಜಿಸಿದ್ದ 4ನೇ ಈಶಾನ್ಯ ಭಾರತ ಉತ್ಸವದಲ್ಲಿ ಪ್ರದರ್ಶನ ನೀಡಲು ಸಿಂಗಾಪುರಕ್ಕೆ ತೆರಳಿದ್ದ ಗಾರ್ಗ್ ಸಮುದ್ರದಲ್ಲಿ ಈಜುವಾಗ ಮುಳುಗಿ ಸಾವನ್ನಪ್ಪಿದ್ದರು.
ಅಸ್ಸಾಂನ ಮಾಜಿ ಐಪಿಎಸ್ ಅಧಿಕಾರಿ ಮತ್ತು ಮಾಜಿ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ)ರಾಗಿರುವ ಭಾಸ್ಕರ್ ಜ್ಯೋತಿ ಮಹಾಂತ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಸಹೋದರನ ಹೆಸರು ಮಾಧ್ಯಮಗಳಲ್ಲಿ ಕಾಣಿಸಿಕೊಂಡ ನಂತರ, ಸಿಐಸಿಯಾಗಿ ಮುಂದುವರಿಯುವುದು ಸೂಕ್ತವಲ್ಲ ಎಂದು ಭಾವಿಸಿದೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
"ನನ್ನ ಸಹೋದರನ ಬಗ್ಗೆ ಯಾವುದೇ ಆರ್‌ಟಿಐ ಅರ್ಜಿ ಸಲ್ಲಿಸಿದರೆ, ಅದು ಅನುಮಾನಗಳಿಗೆ ಅಥವಾ ತಪ್ಪು ವ್ಯಾಖ್ಯಾನಗಳಿಗೆ ಕಾರಣವಾಗಬಹುದು ಎಂದು ನನ್ನ ಆತ್ಮಸಾಕ್ಷಿ ಹೇಳಿತು. ಸಣ್ಣ ಅನುಮಾನವನ್ನು ತಪ್ಪಿಸಲು, ನಾನು ರಾಜೀನಾಮೆ ನೀಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.