

ಬೆಂಗಳೂರು: ಸಮವಸ್ತ್ರ, ಪಾದರಕ್ಷೆ, ಮಧ್ಯಾಹ್ನದ ಊಟ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದರೂ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂದು ರಾಜ್ಯ ಸರ್ಕಾರ ಬೇಸರ ವ್ಯಕ್ತಪಡಿಸಿದೆ.
ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಎಂಎಲ್‌ಸಿ ನಿರಾಣಿ ಹನುಮಂತ್ ರುದ್ರಪ್ಪ ಅವರ ಪ್ರಶ್ನೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧುಬ ಸೋಮವಾರ ಅವರು ಉತ್ತರಿಸಿದರು.
ಕಳೆದ ಮೂರು ವರ್ಷಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳ ದಾಖಲಾತಿ ಸುಮಾರು ಶೇ.11.20 ಕುಸಿತ ಕಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದು ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭದ ಪರಿಣಾಮವಲ್ಲ, ಬದಲಾಗಿ ಪೋಷಕರಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಮೇಲಿನ ಆಸಕ್ತಿ, ರಾಷ್ಟ್ರೀಯ ಪಠ್ಯಕ್ರಮಗಳತ್ತ ಆಕರ್ಷಣೆ ಹಾಗೂ ಖಾಸಗಿ ಶಾಲೆಗಳ ಹೆಚ್ಚಳವೇ ಪ್ರಮುಖ ಕಾರಣಗಳೆಂದು ಹೇಳಿದರು.
ಇದೇ ವೇಳೆ ಸರ್ಕಾರಿ ಶಾಲೆಗಳಲ್ಲಿನ ದಾಖಲಾತಿ ಹೆಚ್ಚಿಸಲು ಸರ್ಕಾರ ಜಾಗೃತಿ ಅಭಿಯಾನ ಆರಂಭಿಸುವುದಾಗಿ ತಿಳಿಸಿದ ಅವರು, ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ತರಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
1ರಿಂದ 5ನೇ ತರಗತಿವರೆಗೆ ದ್ವಿಭಾಷಾ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗಿದ್ದು, ಉತ್ತಮ ಮೂಲಸೌಕರ್ಯ ಮತ್ತು ಹೆಚ್ಚಿನ ದಾಖಲಾತಿ ಇರುವ ಕೆಲವು ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮಾದರಿಯಲ್ಲಿ ಪ್ರೀ-ಪ್ರೈಮರಿ ಇಂದ ಪಿಯುಸಿ ವರೆಗೂ ಶಿಕ್ಷಣ ನೀಡುವಂತೆ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆಪಿಎಸ್ ಆರಂಭಿಸಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿ, ಸರ್ಕಾರ ಸಿದ್ಧವಿದ್ದರೂ ಶಾಲೆಗಳನ್ನು ವಿಲೀನಗೊಳಿಸಲಾಗುತ್ತಿದೆ ಅಥವಾ ಮುಚ್ಚಲಾಗುತ್ತಿದೆ ಎಂಬ ವದಂತಿಗಳು ಹರಡುತ್ತಿವೆ ಎಂದು ಹೇಳಿದರು. ಯಾವುದೇ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದೂ ಇದೇ ವೇಳೆ ಸ್ಪಷ್ಟಪಡಿಸಿದರು.
ಶಿಕ್ಷಕ ವಿ.ಎನ್. ರಾಜಶೇಖರ್ ಮಾತನಾಡಿ, ಮೊದಲು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಆದ್ಯತೆ ನೀಡಬೇಕು ಹಾಗೂ ಗುಣಮಟ್ಟದ ಮೂಲಸೌಕರ್ಯ ಒದಗಿಸಬೇಕು ಎಂದು ಹೇಳಿದರು.
ಪ್ರಾಥಮಿಕ ಶಾಲೆಗಳ ನಿರ್ವಹಣೆಗೆ ವರ್ಷಕ್ಕೆ ಕೇವಲ ರೂ.10,000–ರೂ.15,000, ಉನ್ನತ ಪ್ರಾಥಮಿಕ ಶಾಲೆಗಳಿಗೆ ರೂ.20,000, ಪ್ರೌಢಶಾಲೆಗಳಿಗೆ ರೂ.22,000–ರೂ.25,000 ಮಾತ್ರ ನೀಡಲಾಗುತ್ತಿದೆ. ಇದು ಶಾಲೆಗಳ ಸ್ವಚ್ಛತೆ ಹಾಗೂ ದುರಸ್ತಿ ಕಾರ್ಯಗಳಿಗೆ ಸಾಕಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ, ಬಿಜೆಪಿ ಎಂಎಲ್‌ಸಿ ಎಚ್.ಎಸ್. ಗೋಪಿನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ ಅವರು, “ಶಿಕ್ಷಕರಿಲ್ಲದ ಶಾಲೆಗಳು ಪೂಜಾರಿಯಿಲ್ಲದ ದೇವಸ್ಥಾನಗಳಂತಿವೆ” ಎಂದು ಹೇಳಿ, 15,000 ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ಶಾಲಾ ಶಿಕ್ಷಕರ ಇಂಗ್ಲಿಷ್ ಬೋಧನಾ ಸಾಮರ್ಥ್ಯ ಹೆಚ್ಚಿಸಲು ವಿಶೇಷ ತರಬೇತಿಗೂ ಬಜೆಟ್‌ನಲ್ಲಿ ಅನುದಾನ ನೀಡಲಾಗಿದೆ ಎಂದರು.
ಬಿಜೆಪಿ ಎಂಎಲ್‌ಸಿ ವಿವೇಕಾನಂದ ಅವರು ಮಾತನಾಡಿ, ರಾಷ್ಟ್ರೀಯ ಪಠ್ಯಕ್ರಮವನ್ನು ಅನುಸರಿಸುವ ಶಾಲೆಗಳಲ್ಲಿ - ಐಸಿಎಸ್‌ಇ ಮತ್ತು ಸಿಬಿಎಸ್‌ಇ, ಪ್ರತಿ 45 ಮಕ್ಕಳಿಗೆ ಒಬ್ಬ ಶಿಕ್ಷಕರಿದ್ದಾರೆ. ಆದರೆ, ಸರ್ಕಾರಿ ಶಾಲೆಗಳಲ್ಲಿ 320 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಇದ್ದಾರೆ. ಇದು ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರಿದೆ. ಅನುಪಾತ ಹೆಚ್ಚಾಗಬೇಕು ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಸಚಿವರು, ಎಲ್ಲಾ 320 ವಿದ್ಯಾರ್ಥಿಗಳು ಒಂದೇ ತರಗತಿಯಲ್ಲಿ ಒಟ್ಟಿಗೆ ಇಲ್ಲ. ಅವರನ್ನು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಹೇಳಿದರು. ಅನುಪಾತವನ್ನು ಹೆಚ್ಚಿಸುವ ವಿನಂತಿಯನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು
Advertisement