ಮುಂಬೈ: ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ಲೈವ್ ಝೂಮ್ ಮೀಟಿಂಗ್ ನಲ್ಲೇ ಮ್ಯಾನೇಜರ್ ಗೆ ಬೈದು ರಾಜಿನಾಮೆ ಕೊಟ್ಟಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಖಾಸಗಿ ಸಂಸ್ಥೆಯ ಸೇಲ್ಸ್ ಮ್ಯಾನೇಜರ್ ಸಂಸ್ಥೆಯ ಸೇಲ್ಸ್ ತಗ್ಗಿರುವ ಕುರಿತು ಸಹೋದ್ಯೋಗಿಗಳೊಂದಿಗೆ ಸಭೆ ನಡೆಸಿದ್ದರು. ಈ ವೇಳೆ ಮ್ಯಾನೇಜರ್ ವಿರುದ್ಧ ಕೆಂಡಾಮಂಡಲರಾದ ಉದ್ಯೋಗಿ ಲೈವ್ ಮೀಟಿಂಗ್ ನಲ್ಲೇ ರಾಜಿನಾಮೆ ನೀಡಿರುವ ವಿಡಿಯೋ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿರುವಂತೆ ಸೇಲ್ಸ್ ಮ್ಯಾನೇಜರ್ ಸಂಸ್ಥೆಯ ಸೇಲ್ಸ್ ತಗ್ಗಿರುವ ಕುರಿತು ಸಹೋದ್ಯೋಗಿಗಳ ಪ್ರಶ್ನಿಸುತ್ತಿದ್ದರು. ಈ ವೇಳೆ ಉದ್ಯೋಗಿಯೊಬ್ಬರನ್ನು ಉಲ್ಲೇಖಿಸಿ 'ನಿನ್ನೆ ಎಲ್ಲಿದ್ದಪ್ಪ ನೀನು' ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಮ್ಯಾನೇಜರ್ ಗೆ ಉತ್ತರಿಸಿದ ಉದ್ಯೋಗಿ 'ನಾನು ರಜೆಯಲ್ಲಿದ್ದೆ. ಹೀಗಾಗಿ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದೆ ಸರ್ ಎಂದು ಉತ್ತರಿಸಿದ್ದಾರೆ. ಈ ವೇಳೆ ಸೇಲ್ಸ್ ಮ್ಯಾನೇಜರ್ ರಜೆಯಲ್ಲಿದ್ದರೆ ಗ್ರಾಹಕರ ಕಾಲ್ ರಿಸೀವ್ ಮಾಡಬಾರದು ಎಂದು ಯಾರು ಹೇಳಿದ್ದು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಉದ್ಯೋಗಿ ರಜೆಯಲ್ಲಿರುವಾಗ ಯಾರು ಕೆಲಸ ಮಾಡುತ್ತಾರೆ ಸರ್ ಎಂದು ಮರು ಉತ್ತರ ನೀಡಿದ್ದಾರೆ.
ಇದರಿಂದ ಆಕ್ರೋಶಗೊಂಡ ಸೇಲ್ಸ್ ಮಾನೇಜರ್, 'ಗ್ರಾಹಕ ಫೋನ್ ರಿಸೀವ್ ಮಾಡ್ಲಿಲ್ಲಾ ಅಂದ್ರೆ ಸಂಸ್ಥೆಯ ಸೇಲ್ಸ್ ಹೇಗೆ ಬೆಳೆಯುತ್ತದೆ. ನಿನಗೆ ಕೆಲಸ ಮಾಡಬೇಕು ಅಂತ ಇದೆಯೋ ಇಲ್ಲವೋ? ಟೈಮ್ ಪಾಸ್ ಮಾಡಲು ಬಂದಿದ್ಯಾ ಇಲ್ಲಿಗೆ.. ಎಂದು ಹೇಳಿದ್ದು ಈ ವೇಳೆ ಅದಕ್ಕೂ ಉತ್ತರಿಸಿದ ಉದ್ಯೋಗಿ ಸರ್ ನನ್ನ ಎಲ್ಲ ಟಾರ್ಗೆಟ್ ಪೂರ್ಣಗೊಂಡಿದೆ. ಈ ಸಂಬಂದ ಫಾಲೋಅಪ್ ಗಳನ್ನು ಕೂಡ ಪಡೆದಿದ್ದೇನೆ ಎಂದು ಉತ್ತರಿಸಿದ್ದಾರೆ.
ಇದಕ್ಕೆ ಮ್ಯಾನೇಜರ್ ಯಾವ ಟಾರ್ಗೆಟ್ ಪೂರ್ಣಗೊಂಡಿದೆ..? ಕಳೆದ ಬಾರಿಯ ಸೇಲ್ಸ್ ಪ್ರಮಾಣವೇ ಇನ್ನೂ ಹಾಗೆ ಉಳಿದಿದೆ. ಅದಾಗಲೇ ರಜೆ ತೆಗೆದುಕೊಂಡು ಮನೆಯಲ್ಲಿ ಕೂತಿದ್ಯಾ..! ಎಂದಾಗ.. ವಾರ ಪೂರ್ತಿ ಕೆಲಸ ಮಾಡುತ್ತೇವೆ.. ಸರ್. ಒಂದು ದಿನ ರಜೆ ತೆಗೆದುಕೊಂಡು ಮನೆಯಲ್ಲಿರಬಾರದಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮತ್ತೆ ಮ್ಯಾನೇಜರ್ ಸೇಲ್ಸ್ ಪೂರ್ಣವಾಗಿಲ್ಲ.. ಸೇಲ್ಸ್ ಪೂರ್ಣಗೊಳಿಸಿದ ಬಳಿಕ ರಜೆ ತಗೋ.. ಎಂದು ಖಾರವಾಗಿ ಹೇಳಿದ್ದಾರೆ.
ಮ್ಯಾನೇಜರ್ ನಡೆಯಿಂದ ಆಕ್ರೋಶಗೊಂಡ ಉದ್ಯೋಗಿ.. ಸರ್ ಮೊದಲು ಸರಿಯಾಗಿ ಮಾತಾಡಿ.. ಕೆಲಸ ಅಂತ ಬಂದ್ರೆ ಮಾರ್ಕೆಟ್ ನಲ್ಲಿ ಇಂತಹ ಸಾಕಷ್ಟು ಕಂಪನಿಗಳಿವೆ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಸೇಲ್ಸ್ ಮ್ಯಾನೇಜರ್ ಎಲ್ಲಿಗೆ ಹೋಗ್ತೀಯಾ.. ತಟ್ಟೆ ಹಿಡಿದು ಬಿಕ್ಷೆ ಬೇಡ ಬೇಕಾಗುತ್ತದೆ ಎಂದಾಗ ಉದ್ಯೋಗಿಯ ತಾಳ್ಮೆಯ ಕಟ್ಟೆ ಒಡೆಯುತ್ತದೆ.
ನಿನ್ ಯೋಗ್ಯತೆಗೆ ದೀಪಾವಳಿ ಬೋನಸ್ ಕೂಡ ಕೊಟ್ಟಿಲ್ಲಾ..'
ಸೇಲ್ಸ್ ಮ್ಯಾನೇಜರ್ ಮಾತಿನಿಂದ ಆಕ್ರೋಶಗೊಂಡ ಉದ್ಯೋಗ ಅದ್ಯಾವ ಸೀಮೆ ಸಂಸ್ಥೆ ನಡೆಸ್ತಾ ಇದ್ಯಾ ನೀನು.. ರಜೆ ಸಮಯದಲ್ಲಿ ಯಾರು ಕೆಲಸ ಮಾಡುತ್ತಾರೆ? ನಿನ್ ಯೋಗ್ಯತೆ ದೀಪಾವಳಿ ಬೋನಸ್ ಕೂಡ ಕೊಟ್ಟಿಲ್ಲಾ.. ಮಾತಾಡ್ತೀಯಾ.. ನಿನ್ ಕೆಲಸ ತಗೊಂಡು ಕೆಳಗೆ ಇಟ್ಕೋ.. ಎಂದು ಉದ್ಯೋಗಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಉದ್ಯೋಗಿ ಮಾತಿನಿಂದ ಅಪಮಾನಕ್ಕೀಡಾದ ಸೇಲ್ಸ್ ಮ್ಯಾನೇಜರ್ ನಿನ್ನಂತವರನ್ನು ಯಾರು ಕೆಲಸಕ್ಕೆ ಇಟ್ಟುಕೊಳ್ಳುತ್ತಾರೆ.. ಈಗಲೇ ಕಿತ್ತೊಗೆಯುತ್ತೇನೆ ಎಂದು ಹೇಳಿದಾಗ.. ಉದ್ಯೋಗಿ ಕೆಲಸ ಯಾಕ್ ಮಾಡ್ಲಿ.. ನಾನೇ ಹೊಸ ಬಿಸಿನೆಸ್ ಮಾಡ್ತೀನಿ. ಇಲ್ಲಿ ಕೇಳು ರಾಜಿನಾಮೆ ಕೊಡ್ತೀನಿ bye.. ಎಂದು ಹೇಳಿ ಕರೆ ಕಟ್ ಮಾಡುತ್ತಾರೆ.