ಚಂಡೀಗಢ: ಆಘಾತಕಾರಿ ಘಟನೆಯೊಂದರಲ್ಲಿ, ಹರಿಯಾಣದ ಹಿಸಾರ್‌ನಲ್ಲಿ ತಮ್ಮ ಮನೆಯ ಹೊರಗೆ ಜನರ ಗುಂಪೊಂದು ಗಲಾಟೆ ನಡೆಸುತ್ತಿರುವುದನ್ನು ತಡೆಯಲು ಯತ್ನಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಮೇಶ್ ಕುಮಾರ್ ಅವರನ್ನು ಇಟ್ಟಿಗೆ ಮತ್ತು ದೊಣ್ಣೆಗಳಿಂದ ಕ್ರೂರವಾಗಿ ಥಳಿಸಿ ಕೊಂದ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ.
ಹಿಸಾರ್‌ನ ಶ್ಯಾಮ್‌ಲಾಲ್ ಧನಿಯಲ್ಲಿರುವ ಕುಮಾರ್ ಅವರ ಮನೆಯ ನೆರೆಹೊರೆಯಲ್ಲಿ ಯುವಕರ ಗುಂಪೊಂದು ಗಲಾಟೆ ನಡೆಸಿತು. ಗದ್ದಲ ಕೇಳಿ ಕುಮಾರ್ ಮನೆಯಿಂದ ಹೊರಬಂದು ಅಸಭ್ಯ ಭಾಷೆ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಆರಂಭದಲ್ಲಿ ಆ ಗುಂಪು ಸ್ಥಳದಿಂದ ಹೊರಟುಹೋಯಿತು. ಆದರೆ ಒಂದು ಗಂಟೆಯ ನಂತರ ಕಾರು ಮತ್ತು ಬೈಕ್‌ಗಳಲ್ಲಿ ಹೆಚ್ಚಿನ ಜನರೊಂದಿಗೆ ಬಂದ ಗುಂಪು, ಕುಮಾರ್ ಅವರ ಮನೆಯ ಮುಂದೆ ಮತ್ತೆ ಗಲಾಟೆ ಮಾಡಿದರು. ಕುಮಾರ್ ಮತ್ತೆ ಮಧ್ಯಪ್ರವೇಶಿಸಿದಾಗ, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ದೊಣ್ಣೆ ಮತ್ತು ಇಟ್ಟಿಗೆಗಳಿಂದ ಹಲ್ಲೆ ನಡೆಸಿ, ಸ್ಥಳದಲ್ಲೇ ಅವರನ್ನು ಹತ್ಯೆ ಮಾಡಿದ್ದಾರೆ.
ಕುಮಾರ್ ಅವರ ಕುಟುಂಬವು ಗಲಾಟೆಯ ಶಬ್ದ ಕೇಳಿ ಮನೆಯಿಂದ ಹೊರಗೆ ಓಡಿ ಬಂದು ಸಹಾಯ ಕೋರಿತು. ಆದರೆ ದಾಳಿಕೋರರು ಆಗಲೇ ತಮ್ಮ ಕಾರು ಮತ್ತು ಎರಡು ಬೈಕ್‌ಗಳನ್ನು ಬಿಟ್ಟು ಪರಾರಿಯಾಗಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿದರು.
ಹಿಸಾರ್‌ನಲ್ಲಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಕಚೇರಿಯಲ್ಲಿ ನಿಯೋಜಿತರಾಗಿದ್ದ 57 ವರ್ಷದ ಕುಮಾರ್ ಮುಂದಿನ ವರ್ಷ ಜನವರಿಯಲ್ಲಿ ನಿವೃತ್ತರಾಗಬೇಕಿತ್ತು.
ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಅವರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಆರೋಪಿಗಳು ಪ್ರಸ್ತುತ ಪರಾರಿಯಾಗಿದ್ದಾರೆ. ಕುಮಾರ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶಶಾಂಕ್ ಕುಮಾರ್ ಸಾವನ್ ಹೇಳಿದ್ದಾರೆ.