ನವದೆಹಲಿ: ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, 2025ರ ಡಿಸೆಂಬರ್ 1 ರಿಂದ 19ರವರೆಗೂ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಸುವ ಸರ್ಕಾರದ ಪ್ರಸ್ತಾವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಹಾಗೂ ಜನರ ಆಶೋತ್ತರಗಳನ್ನು ಈಡೇರಿಸಲು ರಚನಾತ್ಮಕ ಹಾಗೂ ಅರ್ಥಪೂರ್ಣ ಅಧಿವೇಶನವನ್ನು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯ ನಂತರ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನ ಮಹತ್ವದ್ದಾಗಿದೆ.
ಬಿಹಾರದಲ್ಲಿ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ನಂತರ ಮೊದಲ ಹಂತದ ಚುನಾವಣೆ ನಡೆಸಲಾಗಿದೆ. ವಿರೋಧ ಪಕ್ಷಗಳು ರಾಷ್ಟ್ರವ್ಯಾಪಿ SIR ಮತ್ತು ಹರಿಯಾಣ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಮತ ಕಳ್ಳತನ ಆರೋಪ ವಿಚಾರ ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಸಂವಿಧಾನದ 130 ನೇ ತಿದ್ದುಪಡಿ ಮಸೂದೆ, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ ಈ ಬಾರಿಯ ಅಧಿವೇಶನದಲ್ಲಿ ಅಂಗೀಕಾರವಾಗುವ ಸಾಧ್ಯತೆಯಿದೆ
ಜುಲೈ 21 ರಿಂದ ಆಗಸ್ಟ್ 21 ರವರೆಗೆ ನಡೆದ ಕೊನೆಯ ಸಂಸತ್ ಅಧಿವೇಶನ ಪದೇ ಪದೇ ಅಡ್ಡಿ, ಮುಂದೂಡಿಕೆ ಮತ್ತು ಸಭಾತ್ಯಾಗಗಳಿಗೆ ಸಾಕ್ಷಿಯಾಗಿತ್ತು.