ಶುಕ್ರವಾರ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಜನಶಕ್ತಿ ಜನತಾ ದಳದ ಸಂಸ್ಥಾಪಕ ತೇಜ್ ಪ್ರತಾಪ್ ಯಾದವ್ ಮತ್ತು ಬಿಜೆಪಿ ಸಂಸದ ರವಿ ಕಿಶನ್ ಒಟ್ಟಿಗೆ ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಯ ನಡುವೆ ಹುಬ್ಬೇರಿಸಿದೆ.
ಲಾಲು ಪುತ್ರನಿಗೆ ಎನ್ ಡಿಎ ಗಾಳಾ ಹಾಕುತ್ತಿದ್ದೆಯೇ? ಎಂಬ ಊಹಾಪೋಹಗಳಿಗೆ ಈ ಭೇಟಿ ಕಾರಣವಾಗಿದೆ. ವಿಮಾನ ನಿಲ್ದಾಣದಿಂದ ಅವರು ಮಾತನಾಡುತ್ತಾ ಹೊರಬರುತ್ತಿದ್ದಂತೆ, ಪತ್ರಕರ್ತರು ಅವರನ್ನು ಪ್ರಶ್ನೆಗಳನ್ನು ಕೇಳಿದ್ದಾರೆ. ಒಂದು ಕಾಲದಲ್ಲಿ ಬಿಜೆಪಿ-ಆರ್‌ಎಸ್‌ಎಸ್‌ನ ಕಟು ವಿಮರ್ಶಕರಾಗಿದ್ದ ಮಾಜಿ ಆರ್‌ಜೆಡಿ ನಾಯಕ ಕಿಶನ್ ಜೊತೆಗೆ ತೇಜ್ ಪ್ರತಾಪ್ ಕಾಣಿಸಿಕೊಂಡಿರುವುದು ಹೊಸ ರಾಜಕೀಯ ಸಮೀಕರಣವನ್ನು ಸೂಚಿಸುತ್ತದೆಯೇ ಎಂದು ಪತ್ರಕರ್ತರು ವಿಶ್ಲೇಷಿಸುತ್ತಿದ್ದಾರೆ.
ಒಂದು ದಿನದ ಬಿರುಸಿನ ಪ್ರಚಾರದ ನಂತರ ಇಬ್ಬರೂ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅವರ ತಂದೆ ಲಾಲು ಪ್ರಸಾದ್ ಅವರಿಂದ ಆರ್‌ಜೆಡಿಯಿಂದ ಹೊರಹಾಕಲ್ಪಟ್ಟ ಯಾದವ್, ಗಯಾದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳಿಗಾಗಿ ಪ್ರಚಾರ ನಡೆಸುತ್ತಿದ್ದಾಗ, ಕಿಶನ್ ಪೂರ್ವ ಚಂಪಾರಣ್ ಮತ್ತು ಪಶ್ಚಿಮ ಚಂಪಾರಣ್ ಜಿಲ್ಲೆಗಳಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾಯುತ್ತಿದ್ದ ವರದಿಗಾರರು ಅವರನ್ನು ಸಂಪರ್ಕಿಸಿದಾಗ, ಪ್ರತಿಕ್ರಿಯೆ ನೀಡಿರುವ ಯಾದವ್, "ನಾನು ಮೊದಲ ಬಾರಿಗೆ ರವಿ ಕಿಶನ್ ಅವರನ್ನು ಭೇಟಿಯಾಗುತ್ತಿದ್ದೇನೆ. ಖಂಡಿತ, ಶಿವನ ಮೇಲಿನ ನಮ್ಮ ಭಕ್ತಿಯ ವಿಷಯಕ್ಕೆ ಬಂದಾಗ ಅವರು ಮತ್ತು ನಾನು ಒಂದೇ ಮನಸ್ಸಿನವರಾಗಿದ್ದೇವೆ. ನಾವಿಬ್ಬರೂ ನಮ್ಮ ಹಣೆಯ ಮೇಲೆ 'ಟಿಕಾ' ಧರಿಸುತ್ತೇವೆ." ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಬಿಜೆಪಿ ಜೊತೆ ಸೇರಿಕೊಳ್ಳಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿರುವ ತೇಜ್ ಪ್ರತಾಪ್, ಹಿಂದಿನ ಮಹುವಾ ಕ್ಷೇತ್ರದಿಂದ ತಮ್ಮ ಅದೃಷ್ಟ ಪರೀಕ್ಷಿಸುತ್ತಿರುವ ಹಸನ್‌ಪುರ ಶಾಸಕ ನೇರ ಉತ್ತರ ನೀಡದೆ, "ನಿರುದ್ಯೋಗ ಹೋಗಲಾಡಿಸುವ ಯಾರೊಂದಿಗಾದರೂ ನಾನು ಇರುತ್ತೇನೆ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
"ಕೆಲವು ಹಿರಿಯ ಬಿಜೆಪಿ ನಾಯಕರಿಂದ" ಹೊಗಳಿಕೆಯ ಬಗ್ಗೆ ಮತ್ತೆ ಕೇಳಿದಾಗ, ಕಿಶನ್ ಮಧ್ಯಪ್ರವೇಶಿಸಿ, "ಜನರು ಹೊಗಳುತ್ತಿರುವುದು ಅವರ ಹೃದಯ ವೈಶಾಲ್ಯತೆಯನ್ನು" ಎಂದು ಹೇಳಿದರು.
"ಏನು ಬೇಕಾದರೂ ಆಗಬಹುದು. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಭೋಲೆನಾಥ್‌ನ ಎಲ್ಲಾ ಭಕ್ತರಿಗೆ ಬಾಗಿಲು ತೆರೆದಿರುತ್ತಾರೆ, ರಾಜಕೀಯ ಉದ್ದೇಶ ಹೊಂದಿರುವವರಿಗೆ ಅಲ್ಲ" ಎಂದು ನಟ-ರಾಜಕಾರಣಿಯಾಗಿರುವ ರವಿ ಕಿಶನ್ ಹೇಳಿದ್ದಾರೆ.
ಆದಾಗ್ಯೂ, ಆರ್‌ಜೆಡಿ ಮುಖ್ಯಸ್ಥರ ಹಿರಿಯ ಮಗನಿಗೆ ಅನ್ಯಾಯವಾಗಿದೆ ಎಂದು ಭಾವಿಸುತ್ತೀರಾ? ಎಂದು ಕೇಳಿದಾಗ ಕಿಶನ್ ರಕ್ಷಣಾತ್ಮಕವಾಗಿ ಹೇಳಿಕೆ ನೀಡಿದರು. "ಈಗ, ಅಂತಹ ಪ್ರಶ್ನೆಗಳನ್ನು ನನಗೆ ಕೇಳಬೇಡಿ. ಇದು ಚುನಾವಣಾ ಸಮಯ. ಆದರೆ, ಬಿಹಾರದ ಜನರು ಸರಿ ತಪ್ಪನ್ನು ವಿವೇಚಿಸುವಷ್ಟು ಬುದ್ಧಿವಂತರಿದ್ದಾರೆ ಎಂಬುದು ಖಚಿತ" ಎಂದಷ್ಟೇ ಉತ್ತರಿಸಿದರು.