ಚೆನ್ನೈ: 14 ವರ್ಷದ ಬಾಲಕನ ಬೆದರಿಸಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇರೆಗೆ ನ್ಯಾಯಾಲಯ ಮಹಿಳೆಯೊಬ್ಬರಿಗೆ 54 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ತಮಿಳುನಾಡಿನ ತಿರುವರೂರಿನಲ್ಲಿ ಈ ಘಟನೆ ನಡೆದಿದ್ದು, 10ನೇ ತರಗತಿ ವಿದ್ಯಾರ್ಥಿಯಾಗಿದ್ದ ಬಾಲಕನಿಗೆ ಈಕೆ ಲೈಂಗಿಕ ಕ್ರಿಯೆಗೆ ಕಿರುಕುಳ ನೀಡಿದ್ದಳು. ಆತನಿಗೆ ಬೆದರಿಸಿ ಆತನನ್ನು ಅಪಹರಿಸಿ ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಳು ಎಂದು ಆರೋಪಿಸಲಾಗಿದೆ.
ತಿರುವರೂರು ಜಿಲ್ಲೆಯ ನನ್ನಿಲಂನ ಎರವಾಂಚೇರಿ ಬಳಿಯ ದೇಡಿಯೂರು ನಿವಾಸಿ ಬಾಲಕೃಷ್ಣನ್ ಅವರ ಪತ್ನಿ 38 ವರ್ಷದ ಲಲಿತಾ ಎಂಬಾಕೆಯೇ ಈ ಪ್ರಕರಣದ ಆರೋಪಿಯಾಗಿದ್ದು, ಆಕೆ ಡೈರಿ ಕೇಂದ್ರದಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದರು.
2021ರ ಸುಮಾರಿಗೆ ಆರೋಪಿ ಲಲಿತಾಗೆ ಬಾಲಕನ ಪರಿಚಯವಾಗಿದೆ. ಬಳಿಕ ಲಲಿತಾ ಬಾಲಕನನ್ನು ಪುಸಲಾಯಿಸಿ ತನ್ನ ಕಾಮತೃಷೆಗೆ ಬಳಿಸಿಕೊಂಡಿದ್ದಾಳೆ. ಬಳಿಕ ಬಾಲಕ ಇದಕ್ಕೆ ನಿರಾಕರಿಸಿದಾಗ ಆಕೆ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾಳೆ.
ಅಂತಿಮವಾಗಿ ಈ ವಿಚಾರವನ್ನು ಸಂತ್ರಸ್ತ ಮನೆಯಲ್ಲಿ ತಿಳಿಸಿದ್ದ. ಇದರಿಂದ ಸಿಟ್ಟಿಗೆದ್ದ ಕುಟುಂಬಸ್ಥರು, ಆಕೆ ಜೊತೆ ಸೇರದಂತೆ ಬಾಲಕನಿಗೆ ಬುದ್ದಿಮಾತು ಹೇಳಿ ಬಾಲಕನನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದಾರೆ.
ಈ ನಡುವೆ ಆರೋಪಿ ಮಹಿಳೆ ಅಕ್ಟೋಬರ್ 26, 2021 ರಂದು, ದೇಡಿಯೂರು ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನನ್ನು 'ನೃತ್ಯ' ಕಲಿಸುವುದಾಗಿ ಹೇಳಿಕೊಂಡು ಹಲವಾರು ಸ್ಥಳಗಳಿಗೆ ಕರೆದೊಯ್ದರು. ಆದರೆ ಈ ವಿಚಾರ ಬಾಲಕನ ಪೋಷಕರಿಗೆ ತಿಳಿದಿರಲಿಲ್ಲ. ಹೀಗಾಗಿ ಪೋಷಕರು ಎರವಾಂಚೇರಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಒಂದು ವಾರದ ನಂತರ, ಪೊಲೀಸ್ ವಿಶೇಷ ತಂಡವು ನಾಗಪಟ್ಟಣಂ ಜಿಲ್ಲೆಯ ವೇಲಂಕಣಿಯಲ್ಲಿ ಅವರನ್ನು ಪತ್ತೆ ಮಾಡಿತು. ನವೆಂಬರ್ 4, 2021ರಂದು ಬಾಲಕನನ್ನು ರಕ್ಷಿಸಿದ ಪೊಲೀಸರು, ಆರೋಪಿ ಲಲಿತಾಳನ್ನು ಬಂಧಿಸಿದರು.
ಇದೇ ಸಂದರ್ಭದಲ್ಲಿ ಲಲಿತಾ ಹುಡುಗನನ್ನು ಹಲವಾರು ಸ್ಥಳಗಳಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾಳೆ ಎಂದು ತಿಳಿದುಬಂದಾಗ, ಪೊಲೀಸರು ಲಲಿತಾಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ ತಿರುವರೂರು ಮಹಿಳಾ ನ್ಯಾಯಾಲಯದ ನ್ಯಾಯಾಧೀಶ ಶರತ್ರಾಜ್ ವಿಚಾರಣೆ ನಡೆಸಿ, ಲಲಿತಾಗೆ 54 ವರ್ಷ ಜೈಲು ಶಿಕ್ಷೆ ಮತ್ತು 18,000 ರೂ. ದಂಡ ವಿಧಿಸಿದ್ದಾರೆ.
54 ವರ್ಷ ಜೈಲು
ಪ್ರಕರಣ ಸಂಬಂಧ ಆರೋಪಿ ಲಲಿತಾ ವಿರುದ್ಧ ಫೋಕ್ಸೋ ಕಾಯ್ದೆಯ ಹಲವು ಸೆಕ್ಷನ್‍ಗಳ ಅಡಿಯಲ್ಲಿ ಆರೋಪ ಹೊರಿಸಲಾಯಿತು. ಇದರ ವಿಚಾರಣೆ ತಿರುವರೂರಿನ ಜಿಲ್ಲಾ ಮಹಿಳಾ ನ್ಯಾಯಾಲಯದಲ್ಲಿ ನಡೆಯಿತು.
ಗುರುವಾರ ನ್ಯಾಯಾಧೀಶರು ಲಲಿತಾ ಅವರನ್ನು ದೋಷಿ ಎಂದು ಘೋಷಿಸಿ, ಫೋಕ್ಸ್ ಕಾಯ್ದೆಯಡಿ ಒಟ್ಟು 54 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಇದರಲ್ಲಿ ಸೆಕ್ಷನ್ 5(I) (ಲೈಂಗಿಕ ದೌರ್ಜನ್ಯ) ಮತ್ತು 5(c) (ಸಾರ್ವಜನಿಕ ಸೇವಕರಿಂದ ಲೈಂಗಿಕ ದೌರ್ಜನ್ಯ) ಅಡಿಯಲ್ಲಿನ ಅಪರಾಧಗಳಿಗೆ ತಲಾ 20 ವರ್ಷಗಳು, ಜೊತೆಗೆ ಸೆಕ್ಷನ್ 9(c) ಅಡಿಯಲ್ಲಿ 5 ವರ್ಷಗಳ ಜೈಲು ಶಿಕ್ಷೆ ಸೇರಿವೆ.
ಭಾರತೀಯ ದಂಡ ಸಂಹಿತೆ ಅಡಿಯಲ್ಲಿ, ಅಪಹರಣಕ್ಕಾಗಿ ಸೆಕ್ಷನ್ 363ರ ಅಡಿಯಲ್ಲಿ 5 ವರ್ಷಗಳು ಮತ್ತು ಲೈಂಗಿಕ ದೌರ್ಜನ್ಯ ನಡೆಸುವ ಉದ್ದೇಶದಿಂದ ಅಪಹರಣಕ್ಕಾಗಿ ಸೆಕ್ಷನ್ 367ರ ಅಡಿಯಲ್ಲಿ ನಾಲ್ಕು ವರ್ಷಗಳ ಶಿಕ್ಷೆ ಸೇರಿವೆ. ಜೈಲು ಶಿಕ್ಷೆ ಜೊತೆಗೆ ಲಲಿತಾಗೆ 18,000 ರೂ. ದಂಡ ವಿಧಿಸಲಾಗಿದೆ. ಹಾಗೆಯೇ ಸರ್ಕಾರವು ಬಾಲಕನಿಗೆ 6 ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿತು.
ಇನ್ನು ಆರೋಪಿ ಲಲಿತಾಳನ್ನು ತಿರುಚಿಯ ಮಹಿಳೆಯರ ವಿಶೇಷ ಜೈಲಿನಲ್ಲಿ ಇರಿಸಲಾಗಿದೆ. ತಿರುಚ್ಚಿ ಪೊಲೀಸ್ ವರಿಷ್ಠಾಧಿಕಾರಿ ಕರುಣ್ ಗರಾದ್ ಅವರು ತನಿಖಾ ತಂಡಗಳನ್ನು ಶ್ಲಾಘಿಸಿ, ಮಕ್ಕಳ ವಿರುದ್ಧ ಅಪರಾಧ ಎಸಗುವವರಿಗೆ ಕಠಿಣ ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಿದರು.