ನವದೆಹಲಿ: ಬಂಧಿತ ಕಾಶ್ಮೀರಿ ವೈದ್ಯನೊಬ್ಬ ನೀಡಿದ ಮಾಹಿತಿಯ ಮೇರೆಗೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಫರಿದಾಬಾದ್‌ನಲ್ಲಿ 300 ಕಿಲೋಗ್ರಾಂಗಳಷ್ಟು ಆರ್‌ಡಿಎಕ್ಸ್, ಒಂದು ಎಕೆ -47 ರೈಫಲ್ ಮತ್ತು ದೊಡ್ಡ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಚಾರಣೆಯ ಸಮಯದಲ್ಲಿ ಡಾ. ಆದಿಲ್ ಅಹ್ಮದ್ ರಾಥರ್ ನೀಡಿದ ಮಾಹಿತಿಯ ಆಧಾರದ ಮೇಲೆ ಈ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಕ್ಕೂ ಮೊದಲು, ಪೊಲೀಸರು ಕಾಶ್ಮೀರ ಕಣಿವೆಯಲ್ಲಿ ವೈದ್ಯರಿಗೆ ಸೇರಿದ ಲಾಕರ್‌ನಿಂದ ಎಕೆ -47 ರೈಫಲ್ ಮತ್ತು ಇತರ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು. ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಶದಲ್ಲಿರುವ ಆತನನ್ನು, ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಸಂಗ್ರಹಿಸುವ ಮತ್ತು ಸಾಗಿಸುವಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ವಿಚಾರಣೆ ನಡೆಸಲಾಗುತ್ತಿದೆ.
ಪುಲ್ವಾಮಾ ಜಿಲ್ಲೆಯ ಕೊಯಿಲ್ ನಿವಾಸಿ ಶಕೀಲ್ ಅಹ್ಮದ್ ಗನೈ ಅವರ ಪುತ್ರ ಮುಜಾಮಿಲ್ ಶಕೀಲ್ ಎಂಬ ಮತ್ತೊಬ್ಬ ವೈದ್ಯನ ಪಾತ್ರವೂ ತನಿಖೆಯಿಂದ ಬಹಿರಂಗಗೊಂಡಿದೆ. ಫರಿದಾಬಾದ್‌ನಲ್ಲಿ ವಶಪಡಿಸಿಕೊಂಡ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಡಾ. ಮುಜಾಮಿಲ್ ಸಹಾಯ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.
ರಾಥರ್ ವಿರುದ್ಧ ಈ ಹಿಂದೆ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು ಕಾಯ್ದೆಯಡಿಯಲ್ಲಿ ಆರೋಪ ಹೊರಿಸಲಾಗಿತ್ತು. ಭಯೋತ್ಪಾದನಾ ಜಾಲಗಳು ಈಗ ಉನ್ನತ ಶಿಕ್ಷಣ ಪಡೆದ ವೃತ್ತಿಪರರನ್ನು ನೇಮಿಸಿಕೊಳ್ಳುತ್ತಿವೆ ಎಂಬುದಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. ಮೂಲಗಳ ಪ್ರಕಾರ, ವೈದ್ಯರು ಈ ಕೃತ್ಯದಲ್ಲಿ ಭಾಗಿಯಾಗಿರುವುದು, ರಾಜಧಾನಿಗೆ ಇಷ್ಟು ಹತ್ತಿರದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಹೇಗೆ ಸಾಗಿಸಲಾಯಿತು ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.