ನವದೆಹಲಿ: ದೆಹಲಿಯಲ್ಲಿ 12 ಮಂದಿಯ ಸಾವಿಗೆ ಕಾರಣವಾದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಂದ ಸ್ಫೋಟಕ ಅಂಶಗಳು ಬೆಳಕಿಗೆ ಬರುತ್ತಿವೆ.
ಹೌದು.. ಅತ್ತ ಹರ್ಯಾಣದ ಫರೀದಾಬಾದ್ ನಲ್ಲಿ 3 ಸಾವಿರ ಕೆಜಿ ಸ್ಫೋಟಕ ಪತ್ತೆ ಬೆನ್ನಲ್ಲೇ ಇತ್ತ ರಾಜಧಾನಿ ದೆಹಲಿಯಲ್ಲಿ ಆತ್ಮಹತ್ಯಾ ದಾಳಿ ಸಂಭವಿಸಿದೆ. ಈ ಭೀಕರ ಸ್ಫೋಟದಲ್ಲಿ ಕನಿಷ್ಠ 12 ಮಂದಿ ಸಾವಿಗೀಡಾಗಿ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ವೈದ್ಯಕೀಯ ಶಿಕ್ಷಣ ಸಂಸ್ಛೆಯ ನುರಿತ ವೈದ್ಯರೇ ಆತ್ಮಹತ್ಯಾ ಬಾಂಬರ್ ಗಳಾಗಿ ಮಾರ್ಪಟ್ಟಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
3000 ಕೆಜಿ ಸ್ಫೋಟಕ..
ಇನ್ನುಈ ದೆಹಲಿ ಸ್ಫೋಟಕ್ಕೂ ಮುನ್ನ ಹರ್ಯಾಣದ ಫರೀದಾಬಾದ್ ನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು ಬಾಡಿಗೆ ಮನೆಯಲ್ಲಿ ಶೇಖರಿಸಿಟ್ಟಿದ್ದ ಬರೊಬ್ಬರಿ 3 ಸಾವಿರ ಕೆಜಿ ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹರಿಯಾಣದ ಫರಿದಾಬಾದ್‌ನಿಂದ ಐಇಡಿ ತಯಾರಿಸುವ ವಸ್ತು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಡಾ. ಮುಜಮ್ಮಿಲ್ ನನ್ನು ಬಂಧಿಸಿದ್ದ ಪೊಲೀಸರು 360 ಕೆಜಿ ಸ್ಫೋಟಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ, ಪಿಸ್ತೂಲ್‌ಗಳು, ಲೈವ್ ಕಾರ್ಟ್ರಿಡ್ಜ್‌ಗಳು, ಟೈಮರ್‌ಗಳು, ಬ್ಯಾಟರಿಗಳು, ವಾಕಿ-ಟಾಕಿ ಸೆಟ್‌ಗಳು, ಹೆವಿ ಮೆಟಲ್ ಮತ್ತು ಸೇರಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಒಂದು ಅಸಾಲ್ಟ್ ರೈಫಲ್, 3 ಮ್ಯಾಗಜೀನ್‌ಗಳು ಮತ್ತು 83 ಲೈವ್ ರೈಫಲ್‌ಗಳು, ಒಂದು ಪಿಸ್ತೂಲ್, 8 ಲೈವ್ ರೈಫಲ್‌ಗಳು, ಎರಡು ಖಾಲಿ ಕಾರ್ಟ್ರಿಡ್ಜ್‌ಗಳು, ಎರಡು ಹೆಚ್ಚುವರಿ ಮ್ಯಾಗಜೀನ್‌ಗಳು, 8 ದೊಡ್ಡ ಸೂಟ್‌ಕೇಸ್‌ಗಳು, 4 ಸಣ್ಣ ಸೂಟ್‌ಕೇಸ್‌ಗಳು ಮತ್ತು ಒಂದು ಬಕೆಟ್‌ನಿಂದ ಸುಮಾರು 360 ಕೆಜಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹರಿಯಾಣದ ಫರಿದಾಬಾದ್‌ನ ಮತ್ತೊಂದು ಮನೆಯಿಂದ 2,563 ಕೆಜಿ ಶಂಕಿತ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾನುವಾರ, ಅಧಿಕಾರಿಗಳು ಫರಿದಾಬಾದ್‌ನ ಧೋಜ್‌ನಲ್ಲಿ ಕಳೆದ ಮೂರುವರೆ ವರ್ಷಗಳಿಂದ ಬಾಡಿಗೆಗೆ ಪಡೆದಿದ್ದ ಕೊಠಡಿಯಿಂದ 350 ಕೆಜಿ ಸ್ಫೋಟಕಗಳು, 20 ಟೈಮರ್‌ಗಳು, ಅಸಾಲ್ಟ್ ರೈಫಲ್‌ಗಳು, ಹ್ಯಾಂಡ್‌ಗನ್‌ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು. ಎರಡನೇ ಮನೆ ಧೋಜ್ ನಿಂದ 4 ಕಿಲೋಮೀಟರ್ ದೂರದಲ್ಲಿರುವ ಫತೇಪುರ್ ಟಾಗಾ ಗ್ರಾಮದಲ್ಲಿದೆ.
ದೇಶದ ವಿವಿಧ ನಗರಗಳಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು
ಇನ್ನು ಉಗ್ರರು ಇಷ್ಟು ಬೃಹತ್ ಪ್ರಮಾಣದ ಸ್ಫೋಟಕಗಳನ್ನು ದೊಡ್ಡ ಮಟ್ಟದ ಸಂಚಿಗೆ ಸಂಗ್ರಹಿಸಿದ್ದರು ಎನ್ನಲಾಗಿದೆ. ದೇಶದ ವಿವಿಧ ನಗರಗಳಲ್ಲಿ ಸ್ಫೋಟ ನಡೆಸಿ ಅಪಾರ ಪ್ರಮಾಣದ ಸಾವುನೋವು ಉಂಟು ಮಾಡುವುದು ಉಗ್ರರ ಗುರಿಯಾಗಿತ್ತು ಎನ್ನಲಾಗಿದೆ. ಒಂದು ವೇಳೆ ಉಗ್ರರ ಈ ಸಂಚು ಕಾರ್ಯಗತವಾಗಿದ್ದರೆ ದೇಶದ ಇತಿಹಾಸದಲ್ಲೇ ಕಂಡು ಕೇಳರಿಯದ ಮಟ್ಟದಲ್ಲಿ ದೊಡ್ಡ ಮಟ್ಟದ ಸಾವುನೋವು ಸಂಭವಿಸುತ್ತಿತ್ತು ಎಂದು ಶಂಕಿಸಲಾಗಿದೆ.
ಆಪರೇಷನ್ ಸಿಂಧೂರ್ ನ ಸೇಡು
ಈ ಹಿಂದೆ ಭಾರತ ಪಾಕಿಸ್ತಾನ ಸೇನೆ ಮತ್ತು ಅಲ್ಲಿನ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಆಪರೇಷನ್ ಸಿಂದೂರ್ ಸೇನಾ ಕಾರ್ಯಾಚರಣೆ ನಡೆಸಿತ್ತು. ಇದು ಜಾಗತಿಕವಾಗಿ ಪಾಕಿಸ್ತಾನಕ್ಕೆ ತೀವ್ರ ಮುಜುಗುರ ತಂದಿತ್ತು. ಅಲ್ಲದೆ ಇದೇ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಉಗ್ರಗಾಮಿ ಸಂಘಟನೆ ಜೈಶ್ ಇ ಮೊಹಮದ್ ಸಂಘಟನೆ ಕೂಡ ಅಪಾರ ಪ್ರಮಾಣದ ನಷ್ಟ ಅನುಭವಿಸಿತ್ತು.
ಪ್ರಮುಖವಾಗಿ ಜೈಶ್ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಕುಟುಂಬಸ್ಥರು ಸಾವಿಗೀಡಾಗಿದ್ದರು. ಜೈಶ್ ಉಗ್ರಗಾಮಿಗಳೂ ಕೂಡ ಸಾವನ್ನಪ್ಪಿ ಆತನೆ ಸಂಘಟನೆ ಡೋಲಾಯ ಸ್ಥಿತಿ ತಲುಪಿತ್ತು. ಇದೇ ಕಾರಣಕ್ಕೆ ಮಸೂದ್ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ. ಮಾತ್ರವಲ್ಲದೇ ಭಾರತದ ವಿರುದ್ಧ ದೊಡ್ಡ ಮಟ್ಟದ ದಾಳಿ ನಡೆಸುವುದಾಗಿ ಶಪಥಗೈದಿದ್ದ.
ಇದೀಗ ಉಗ್ರ ಮಸೂದ್ ಅಜರ್ ಭಾರತ ಸೇರಿದಂತೆ ತನ್ನ ಹೆಜ್ಜೆಗುರುತನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳನ್ನು ಚುರುಕುಗೊಳಿಸಿದೆ ಮತ್ತು ಅಕ್ಟೋಬರ್‌ನಲ್ಲಿ ಜಮಾತ್-ಉಲ್-ಮೊಮಿನಾತ್ ಎಂಬ ಹೆಸರಿನ ತನ್ನ ಮೊದಲ ಮಹಿಳಾ ಘಟಕದ ರಚನೆಯನ್ನು ಘೋಷಿಸಿದೆ ಎಂದು ವರದಿಯಾಗಿದೆ. ಹೊಸ ಘಟಕಕ್ಕೆ ನೇಮಕಾತಿ ಅಕ್ಟೋಬರ್ 8 ರಂದು ಪಾಕಿಸ್ತಾನದ ಬಹಾವಲ್ಪುರದ ಮಾರ್ಕಾಜ್ ಉಸ್ಮಾನ್-ಒ-ಅಲಿಯಲ್ಲಿ ಪ್ರಾರಂಭವಾಯಿತು.
ಮಹಿಳಾ ಬ್ರಿಗೇಡ್ ಅನ್ನು ಮಸೂದ್ ಅಜರ್‌ನ ಸಹೋದರಿ ಸಾದಿಯಾ ಅಜರ್ ನೇತೃತ್ವ ವಹಿಸಲಿದ್ದಾರೆ ಎಂದು ವರದಿಯಾಗಿತ್ತು. ಈ ಗುಂಪು ಜೆಇಎಂ ಕಮಾಂಡರ್‌ಗಳ ಪತ್ನಿಯರನ್ನು ಮತ್ತು ಬಹಾವಲ್ಪುರ್, ಕರಾಚಿ, ಮುಜಫರಾಬಾದ್, ಕೋಟ್ಲಿ, ಹರಿಪುರ್ ಮತ್ತು ಮನ್ಸೆಹ್ರಾದಲ್ಲಿರುವ ತನ್ನ ಕೇಂದ್ರಗಳಲ್ಲಿ ಅಧ್ಯಯನ ಮಾಡುತ್ತಿರುವ ಆರ್ಥಿಕವಾಗಿ ದುರ್ಬಲ ಮಹಿಳೆಯರನ್ನು ಸೇರಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ.
ಇದಕ್ಕೆ ಇಂಬು ನೀಡುವಂತೆ ಭಾರತದಲ್ಲಿ ಬಂಧನಕ್ಕೀಡಾಗಿರುವ ಲಕ್ನೋ ಮೂಲದ ಮಹಿಳಾ ವೈದ್ಯೆ ಶಹೀನ್ ಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (ಜೆಇಎಂ) ಗೆ ಮಹಿಳಾ ವಿಭಾಗವನ್ನು ಸ್ಥಾಪಿಸುವ ಮತ್ತು ನೇಮಕಾತಿ ಮಾಡುವ ಜವಾಬ್ದಾರಿ ನೀಡಲಾಗಿತ್ತು ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ.