ನಿನ್ನೆ ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಹುಂಡೈ ಐ20 ಕಾರಿನಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಒಂಬತ್ತು ಜನರು ಮೃತಪಟ್ಟು, ಸುಮಾರು 20 ಜನರು ಗಾಯಗೊಂಡಿದ್ದಾರೆ.
ಸ್ಫೋಟದ ಕಾರಣ ಇನ್ನೂ ತನಿಖೆ ಹಂತದಲ್ಲಿದೆ. ಯಾವುದೇ ಭಯೋತ್ಪಾದಕ ಚಟುವಟಿಕೆಗೆ ಸಂಬಂಧಿಸಿದೆಯೇ ಎಂದು ಅಧಿಕಾರಿಗಳು ಇನ್ನೂ ನಿರ್ಧರಿಸಿಲ್ಲ. ಘಟನೆಯ ಬಗ್ಗೆ ಭದ್ರತಾ ಸಂಸ್ಥೆಗಳು ತನಿಖೆ ಮುಂದುವರಿಸಿರುವುದರಿಂದ ಎಲ್ಲಾ ಸಂಭಾವ್ಯ ಕೋನಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಭಯೋತ್ಪಾದಕ ಕೃತ್ಯದ ಶಂಕೆ ವ್ಯಕ್ತಪಡಿಸಿ ತನಿಖಾಧಿಕಾರಿಗಳು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ)ಯನ್ನು ಅನ್ವಯಿಸಿ ತನಿಖೆ ಮುಂದುವರಿಸಿದ್ದಾರೆ. ಸ್ಫೋಟದ ನಂತರ ದೆಹಲಿ ಮತ್ತು ಮುಂಬೈ,ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಮುಸುಕುಧಾರಿ ವ್ಯಕ್ತಿ ಕಾರು ಡ್ರೈವಿಂಗ್
ಕೆಂಪು ಕೋಟೆ ಬಳಿ ಸ್ಫೋಟಕ್ಕೆ ನಿಮಿಷಗಳ ಮೊದಲು ಹುಂಡೈ ಐ20 ಕಾರನ್ನು ಮಾಸ್ಕ್ ಧರಿಸಿದ ವ್ಯಕ್ತಿ ಚಲಾಯಿಸುತ್ತಿರುವುದು ಕಂಡುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿ ಮೂಲಕ ಹೊಸ ಚಿತ್ರವೊಂದು ಹೊರಬಿದ್ದಿದ್ದು, ಸ್ಫೋಟ ಸಂಭವಿಸುವ ಕೆಲವೇ ನಿಮಿಷಗಳ ಮೊದಲು ಹುಂಡೈ ಐ20 ಕಾರನ್ನು ಚಾಲನೆ ಮಾಡುತ್ತಿದ್ದ ಮಾಸ್ಕ್ ಧರಿಸಿದ ವ್ಯಕ್ತಿಯನ್ನು ತೋರಿಸುತ್ತದೆ.
ಹೊಸ ದೃಶ್ಯಗಳು ಪಾರ್ಕಿಂಗ್ ಸ್ಥಳದಿಂದ ಬಂದಿದ್ದು, ಕಪ್ಪು ಮಾಸ್ಕ್ ಧರಿಸಿದ ವ್ಯಕ್ತಿ HR26CE7674 ನಂಬರ್ ಪ್ಲೇಟ್‌ನೊಂದಿಗೆ ಹುಂಡೈ ಐ20 ಕಾರು ಚಾಲನೆ ಮಾಡುತ್ತಿರುವುದನ್ನು ತೋರಿಸಲಾಗಿದೆ.
i20 ಕಾರು ಮೂರು ಗಂಟೆಗಳ ಕಾಲ ಸ್ಫೋಟ ಬಳಿಯೇ ನಿಂತಿತ್ತು
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಒಂಬತ್ತು ಮಂದಿ ಮೃತಪಟ್ಟು 20 ಜನರು ಗಾಯಗೊಂಡಿದ್ದ ಕೆಂಪು ಕೋಟೆ ಸ್ಫೋಟದಲ್ಲಿ ಭಾಗಿಯಾಗಿದ್ದ ಬಿಳಿ ಬಣ್ಣದ ಹುಂಡೈ i20 ಕಾರು ನಿನ್ನೆ ಮೂರು ಗಂಟೆಗಳಿಗೂ ಹೆಚ್ಚು ಕಾಲ ಸ್ಥಳದ ಬಳಿಯೇ ನಿಂತಿತ್ತು ಎಂದು ತಿಳಿದುಬಂದಿದೆ. HR 26CE7674 ನಂಬರ್ ಪ್ಲೇಟ್ ಹೊಂದಿರುವ ಕಾರು ಅಪರಾಹ್ನ 3:19 ಕ್ಕೆ ಪಾರ್ಕಿಂಗ್ ಸ್ಥಳಕ್ಕೆ ಪ್ರವೇಶಿಸಿ ಸಂಜೆ 6:30 ರ ಸುಮಾರಿಗೆ ಹೊರಟುಹೋಯಿತು.
ನೀಲಿ ಮತ್ತು ಕಪ್ಪು ಬಣ್ಣದ ಟಿ-ಶರ್ಟ್ ಧರಿಸಿದ ಚಾಲಕ ಚಕ್ರದ ಹಿಂದೆ ಕೈ ಇಟ್ಟುಕೊಂಡು ನಿಂತಿರುವುದನ್ನು ಚಿತ್ರಗಳು ತೋರಿಸುತ್ತವೆ.
ದೆಹಲಿ ಸ್ಫೋಟದ ಕುರಿತು ಗೃಹ ಸಚಿವಾಲಯದಲ್ಲಿ ಉನ್ನತ ಮಟ್ಟದ ಸಭೆ
ಕೆಂಪು ಕೋಟೆ ಸ್ಫೋಟದ ನಂತರದ ಪರಿಸ್ಥಿತಿಯನ್ನು ಪರಿಶೀಲಿಸಲು ಗೃಹ ಸಚಿವ ಅಮಿತ್ ಶಾ ಇಂದು ಬೆಳಗ್ಗೆ 9:30 ಕ್ಕೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಗೃಹ ಕಾರ್ಯದರ್ಶಿ, ಐಬಿ ಮುಖ್ಯಸ್ಥರು ಮತ್ತು ದೆಹಲಿ ಪೊಲೀಸ್ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಇಬ್ಬರ ಬಂಧನ
ಕೆಂಪು ಕೋಟೆ ಬಳಿ ಕಾರಿನಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಸಲ್ಮಾನ್ ಮತ್ತು ದೇವೇಂದರ್ ಎಂದು ಗುರುತಿಸಲಾದ ಈ ವ್ಯಕ್ತಿಗಳು ಈ ಹಿಂದೆ ಸ್ಫೋಟಗೊಂಡ ಹುಂಡೈ ಐ20 ಕಾರಿನ ಮಾಲೀಕರಾಗಿದ್ದರು. ಹೆಚ್ಚಿನ ಸುಳಿವುಗಳನ್ನು ಪಡೆಯಲು ಕಾರಿನ ವಿವರವಾದ ಮಾರಾಟ ಬಗ್ಗೆ ಪತ್ತೆಹಚ್ಚಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐರೋಪ್ಯ ಒಕ್ಕೂಟ ಖಂಡನೆ
ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟದಲ್ಲಿ ಜೀವಹಾನಿಗೆ ಫ್ರಾನ್ಸ್ ರಾಯಭಾರಿ ಮತ್ತು ಈಜಿಪ್ಟ್ ರಾಯಭಾರ ಕಚೇರಿಯೊಂದಿಗೆ ಭಾರತದಲ್ಲಿನ ಯುರೋಪಿಯನ್ ಒಕ್ಕೂಟದ ರಾಯಭಾರಿ ಸಂತಾಪ ಸೂಚಿಸಿದರು.
X ನಲ್ಲಿ ಪೋಸ್ಟ್ ಮಾಡಿದ ಭಾರತದ EU ರಾಯಭಾರಿ ಹರ್ವ್ ಡೆಲ್ಫಿನ್, "ದೆಹಲಿ ಸ್ಫೋಟದ ಬಲಿಪಶುಗಳಿಗೆ ನಮ್ಮ ಆಳವಾದ ಸಂತಾಪಗಳು. ಭಾರತೀಯ ಅಧಿಕಾರಿಗಳ ತನಿಖೆ ಮುಂದುವರಿದರೆ, ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳು ಮತ್ತು ಗಾಯಗೊಂಡ ಎಲ್ಲರೊಂದಿಗೆ ಆಘಾತ ಮತ್ತು ದುಃಖದ ಈ ಕ್ಷಣದಲ್ಲಿ ನಾವು ಭಾರತೀಯ ಜನರೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದೆ.
ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ: ಅಮೆರಿಕ ವಿದೇಶಾಂಗ ಇಲಾಖೆ
ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಮಾರಕ ಸ್ಫೋಟದ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಅಮೆರಿಕ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಹೇಳಿದೆ.
ದೆಹಲಿಯಲ್ಲಿ ಸಂಭವಿಸಿದ ಭೀಕರ ಸ್ಫೋಟಕ್ಕೆ ನಮ್ಮ ಸಂತಾಪಗಳು. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗನಮನಿಸುತ್ತಿದ್ದೇವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನಮ್ಮ ಪ್ರಾಮಾಣಿಕ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ ಎಂದು ವಿದೇಶಾಂಗ ಇಲಾಖೆಯ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಬ್ಯೂರೋ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಯುಎಪಿಎ, ಸ್ಫೋಟಕಗಳು, ಕೊಲೆ ಆರೋಪ
ಕೆಂಪು ಕೋಟೆ ಕಾರು ಸ್ಫೋಟದ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ದೆಹಲಿ ಪೊಲೀಸರು ಎಫ್‌ಐಆರ್‌ನಲ್ಲಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯ (ಯುಎಪಿಎ) ಸೆಕ್ಷನ್ 16 ಮತ್ತು 18 ನ್ನು ದಾಖಲಿಸಿದ್ದಾರೆ. ಈ ಸೆಕ್ಷನ್‌ಗಳು ಭಯೋತ್ಪಾದಕ ಕೃತ್ಯಗಳು ಮತ್ತು ಭಯೋತ್ಪಾದನೆಗೆ ಬೆಂಬಲ ನೀಡುವ ಬಗ್ಗೆ ತನಿಖೆ ಮಾಡುತ್ತದೆ.