ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ಸೋಮವಾರ ಸಂಜೆ ನಡೆದ ಕಾರು ಸ್ಫೋಟವನ್ನು "ಭಯೋತ್ಪಾದಕ ದಾಳಿ" ಎಂದು ಬುಧವಾರ ಕೇಂದ್ರ ಸರ್ಕಾರ ಹೇಳಿದ್ದು, ತನಿಖಾ ಸಂಸ್ಥೆಗಳಿಗೆ "ಅತ್ಯಂತ ತುರ್ತಾಗಿ ಮತ್ತು ವೃತ್ತಿಪರತೆ"ಯಿಂದ ಪ್ರಕರಣವನ್ನು ನಿಭಾಯಿಸಲು ಹಾಗೂ ಅಪರಾಧಿಗಳನ್ನು ವಿಳಂಬವಿಲ್ಲದೆ ಬಂಧಿಸುವಂತೆ ನಿರ್ದೇಶಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭೂತಾನ್‌ನಿಂದ ಹಿಂದಿರುಗಿದ ನಂತರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಗೆ ಭಾರತದ ಅಚಲ ಬದ್ಧತೆಯನ್ನು ಪುನರುಚ್ಚರಿಸಲಾಯಿತು.
ಸಚಿವ ಸಂಪುಟ ಸಭೆಯಲ್ಲಿ ಭಯೋತ್ಪಾದಕ ಘಟನೆಯಲ್ಲಿ ಸಾವನ್ನಪ್ಪಿದ ಅಮಾಯಕ ಜೀವಗಳಿಗೆ ಗೌರ ಸಲ್ಲಿಸಲು ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.
ಸಚಿವ ಸಂಪುಟವು, ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ತೀವ್ರ ದುಃಖ ವ್ಯಕ್ತಪಡಿಸುವ ನಿರ್ಣಯ ಅಂಗೀಕರಿಸಿತು ಮತ್ತು ಸರ್ಕಾರದ ಉನ್ನತ ಮಟ್ಟದಲ್ಲಿ ಪರಿಸ್ಥಿತಿಯನ್ನು "ನಿಕಟವಾಗಿ ಮೇಲ್ವಿಚಾರಣೆ" ಮಾಡಲಾಗುತ್ತಿದೆ ಎಂದು ಸಚಿವ ಸಂಪುಟ ಸಭೆಯ ನಂತರ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸಂಪುಟ ಸಭೆಯ ಬಳಿಕ ಹೇಳಿದ್ದಾರೆ.
“ಈ ಹೇಡಿತನದ ಕೃತ್ಯವನ್ನು ಮೋದಿ ಸಂಪುಟ ಸ್ಪಷ್ಟವಾಗಿ ಖಂಡಿಸಿದೆ. ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಗೆ ಭಾರತದ ಅಚಲ ಬದ್ಧತೆಯನ್ನು ಸಂಪುಟ ಪುನರುಚ್ಚರಿಸುತ್ತದೆ” ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಎರಡು ದಿನಗಳ ಭೂತಾನ್ ಭೇಟಿಯಿಂದ ಹಿಂದಿರುಗಿದ ಕೂಡಲೇ ಲೋಕ ನಾಯಕ್ ಜೈ ಪ್ರಕಾಶ್ ಆಸ್ಪತ್ರೆಗೆ ಭೇಟಿ ನೀಡಿ, ಉಗ್ರ ದಾಳಿಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ನಂತರ ತಮ್ಮ ಅಧ್ಯಕ್ಷತೆಯಲ್ಲಿ ಭದ್ರತೆ ಕುರಿತ ಸಂಪುಟ ಸಮಿತಿಯ ಸಭೆ ನಡೆಸಿದರು.