ಫರಿದಾಬಾದ್: ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಕಾರು ಸುದ್ದಿಯಲ್ಲಿದ್ದು, ಶಂಕಿತ ಆರೋಪಿ ಡಾ. ಉಮರ್ ಉನ್ ನಬಿ ಅವರದ್ದು ಎನ್ನಲಾದ ಕೆಂಪು ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಕಾರನ್ನು ಪತ್ತೆಹಚ್ಚಿ ಜಪ್ತಿ ಮಾಡಲಾಗಿದೆ.
ಫರಿದಾಬಾದ್ ಪೊಲೀಸರು DL 10 CK 0458 ನೋಂದಣಿ ಸಂಖ್ಯೆ ಹೊಂದಿರುವ ಕೆಂಪು ಬಣ್ಣದ ಇಕೋಸ್ಪೋರ್ಟ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಿದ ಈ ಕಾರನ್ನು ಖಂಡವಾಲಿ ಗ್ರಾಮದ ಬಳಿ ನಿಲ್ಲಿಸಲಾಗಿತ್ತು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಸ್ಫೋಟಕ್ಕೆ ಬಳಸಲಾದ ಹುಂಡೈ ಐ20 ಕಾರಿನೊಂದಿಗೆ ನಂಟು ಹೊಂದಿರುವ ಇತರ ಶಂಕಿತರು ಮತ್ತೊಂದು ಕೆಂಪು ಬಣ್ಣದ ಕಾರನ್ನು ಹೊಂದಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗವಾದ ನಂತರ ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯ ಎಲ್ಲಾ ಪೊಲೀಸ್ ಠಾಣೆಗಳು, ಪೋಸ್ಟ್‌ಗಳು ಮತ್ತು ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಎಚ್ಚರಿಕೆ ನೀಡಿದ್ದರು.
ಈ ವಾಹನವನ್ನು ಪತ್ತೆಹಚ್ಚಲು ದೆಹಲಿ ಪೊಲೀಸರ ಕನಿಷ್ಠ ಐದು ತಂಡಗಳನ್ನು ನಿಯೋಜಿಸಿದ್ದರು ಮತ್ತು ನೆರೆಯ ಉತ್ತರ ಪ್ರದೇಶ ಮತ್ತು ಹರಿಯಾಣ ಪೊಲೀಸರಿಗೂ ಹುಡುಕಾಟದಲ್ಲಿ ಸಹಾಯ ಮಾಡುವಂತೆ ಸೂಚನೆ ನೀಡಲಾಗಿತ್ತು. ಅಲ್ಲದೆ ಕಾರಿನ ವಿವರಗಳನ್ನು ಉತ್ತರ ಪ್ರದೇಶ ಮತ್ತು ಹರಿಯಾಣ ಪೊಲೀಸರೊಂದಿಗೆ ಹಂಚಿಕೊಂಡಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂತಿಮವಾಗಿ ಖಂಡವಾಲಿ ಗ್ರಾಮದ ಬಳಿ ರೆಡ್ ಕಾರನ್ನು ಪತ್ತೆ ಮಾಡಿ ಜಪ್ತಿ ಮಾಡಲಾಗಿದ್ದು, ಈ ಕಾರು ಉಮರ್ ಉನ್ ನಬಿ ಹೆಸರಿನಲ್ಲಿ ನೋಂದಾಯಿಸಲಾಗಿದೆ.
ಸೋಮವಾರ ಸಂಜೆ ಹುಂಡೈ ಐ20 ಕಾರು ಸ್ಫೋಟ ಸಂಭವಿಸುವ ಮೊದಲು, ಉಮರ್ ನಬಿ ರಾಮಲೀಲಾ ಮೈದಾನದ ಬಳಿಯ ಅಸಫ್ ಅಲಿ ರಸ್ತೆಯಲ್ಲಿರುವ ಮಸೀದಿಯಲ್ಲಿ ತಂಗಿದ್ದರು ಎಂದು ಮೂಲಗಳು ತಿಳಿಸಿವೆ.
ಮಸೀದಿಯಿಂದ ಹೊರಬಂದ ನಂತರ, ಆರೋಪಿ ನೇರವಾಗಿ ಸುನೇಹ್ರಿ ಮಸೀದಿ ಪಾರ್ಕಿಂಗ್ ಸ್ಥಳಕ್ಕೆ ಹೋದರ ಎಂದು ಮೂಲಗಳು ತಿಳಿಸಿವೆ.