ನವದೆಹಲಿ: ಐತಿಹಾಸಿಕ ಕೆಂಪುಕೋಟೆ ಬಳಿಯ ಕಾರು ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಬೆಚ್ಚಿ ಬೀಳಿಸುವಂತಹ ಮಾಹಿತಿಗಳು ಸಿಗುತ್ತಿವೆ. ಬಾಬರಿ ಮಸೀದಿ ಧ್ವಂಸದ ಸೇಡು ತೀರಿಸಿಕೊಳ್ಳಲು ಡಿಸೆಂಬರ್ 6 ರಂದು ದೆಹಲಿಯ 6 ಕಡೆ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು.
ಸ್ಪೋಟಕ ವಸ್ತು ಸಾಗಿಸಲು 32 ಕಾರುಗಳು ಸಜ್ಜು: ಸ್ಪೋಟಕ ವಸ್ತುಗಳು, ಬಾಂಬ್ ಮತ್ತಿತರ ಸರಕುಗಳನ್ನು ಸಾಗಿಸಲು ಮಾರುತಿ ಸುಜುಕಿ ಬ್ರೇಜಾ ಮಾರುತಿ ಸ್ವಿಫ್ಟ್ ಡಿಜೈರ್ ಮತ್ತು ಫೋರ್ಡ್ ಇಕೋಸ್ಪೋರ್ಟ್ ಸೇರಿದಂತೆ ಮೂವತ್ತೆರಡು ಕಾರುಗಳನ್ನು ಸಜ್ಜುಗೊಳಿಸಲಾಗುತಿತ್ತು ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್ 6 ರಂದು ಅಯೋಧ್ಯೆಯಲ್ಲಿನ 16ನೇ ಶತಮಾನದ ಬಾಬರಿ ಮಸೀದಿಯ ಧ್ವಂಸಕ್ಕೆ ಸೇಡು ತೀರಿಸಿಕೊಳ್ಳಲು ದೇಶದ ವಿವಿಧ ಕಡೆಗಳಲ್ಲಿ ಸರಣಿ ಬಾಂಬ್ ಸ್ಪೋಟ ನಡೆಸಲು ಸೋಮವಾರ ಸಂಜೆ ಸ್ಫೋಟಗೊಂಡ ಹುಂಡೈ i20 ಕಾರನ್ನು ಬಳಸಿಕೊಳ್ಳಲು ಯೋಜಿಸಲಾಗಿತ್ತು.
ಇಲ್ಲಿಯವರೆಗೂ ನಾಲ್ಕು ಕಾರುಗಳು ಪತ್ತೆ:
ಇಲ್ಲಿಯವರೆಗೆ ಗುರುತಿಸಲಾದ ನಾಲ್ಕು ಕಾರುಗಳು ಹಳೆಯದಾಗಿದ್ದು, ಅವುಗಳನ್ನು ಹಲವು ಬಾರಿ ಮರು ಮಾರಾಟ ಮಾಡಿದ್ದರಿಂದ ಅವುಗಳನ್ನು ಪತ್ತೆಹಚ್ಚುವುದು ಪೊಲೀಸರಿಗೆ ಕಷ್ಟಕರವಾಗಿತ್ತು. ಆದಾಗ್ಯೂ, ಈಗ ನಾಲ್ಕೂ ಕಾರುಗಳು ಪತ್ತೆಯಾಗಿವೆ.
ಬ್ರೆಝಾ ಕಾರು ಹರಿಯಾಣದ ಫರಿದಾಬಾದ್‌ನಲ್ಲಿರುವ ಅಲ್-ಫಲಾಹ್ ಸ್ಕೂಲ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್ ಆವರಣದಲ್ಲಿ ಕಂಡುಬಂದಿದೆ. ಇದು ಭಯೋತ್ಪಾದಕರ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ. ನೋಂದಣಿ ಸಂಖ್ಯೆ (DL10 CK 0458) ಇಕೋಸ್ಪೋರ್ಟ್ ಕಾರು ಬುಧವಾರ ತಡರಾತ್ರಿ ಹರಿಯಾಣದ ಫರಿದಾಬಾದ್‌ನಲ್ಲಿ ಪತ್ತೆಯಾಗಿದೆ. ಇದರ ಹಿಂದಿನ ಸೀಟಿನಲ್ಲಿ ಯುವಕನೊಬ್ಬ ಮಲಗಿರುವುದು ಕಂಡುಬಂದಿದ್ದು, ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇನ್ನೂ ಸೋಮವಾರ ವಶಕ್ಕೆ ಪಡೆಯಲಾದ ಮಾರುತಿ ಡಿಜೈರ್ ಕಾರಿನಲ್ಲಿ ಅಸಾಲ್ಟ್ ರೈಫಲ್ ಮತ್ತು ಮದ್ದುಗುಂಡುಗಳು ಪತ್ತೆಯಾಗಿವೆ.
ಕೆಂಪು ಕೋಟೆ ಬಳಿ ನವೆಂಬರ್ 10 ರಂದು ಸಂಭವಿಸಿದ ಸ್ಫೋಟದಲ್ಲಿ 12 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಾರನ್ನು ಸ್ಫೋಟಿಸಿರುವ 28 ವರ್ಷದ ವೈದ್ಯ ಉಮರ್, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಮೂಲದವನಾಗಿದ್ದು, ಕಾಶ್ಮೀರ, ಹರಿಯಾಣ ಮತ್ತು ಉತ್ತರ ಪ್ರದೇಶವನ್ನು ವ್ಯಾಪಿಸಿರುವ ಭಯೋತ್ಪಾದಕ ಜಾಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಕೋಟೆಯ ಪ್ರವೇಶದ್ವಾರದ ಹೊರಗೆ ಮತ್ತು ಮೆಟ್ರೋ ನಿಲ್ದಾಣದ ಬಳಿ ಜನನಿಬಿಡ ಟ್ರಾಫಿಕ್ ಸಿಗ್ನಲ್‌ನಲ್ಲಿ ಆತ ಬಾಂಬ್ ಸ್ಫೋಟಿಸಿದ.