ಕರ್ನಾಟಕ ಮತ್ತು ತಮಿಳು ನಾಡು ಮಧ್ಯೆ ಕಾವೇರಿ ನೀರು ಹಂಚಿಕೆಯ ಮೇಕೆದಾಟು ಯೋಜನೆ ವಿವಾದದಲ್ಲಿ ಪ್ರವೇಶಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ನೀರಿನ ಹಂಚಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಈ ಉದ್ದೇಶಕ್ಕಾಗಿ ರಚಿಸಲಾದ ತಜ್ಞರ ಸಮಿತಿ ನಿರ್ವಹಿಸುವುದು ಉತ್ತಮ ಎಂದು ಪುನರುಚ್ಚರಿಸಿದೆ.
ಕರ್ನಾಟಕದ ಮೇಕೆದಾಟು ಅಣೆಕಟ್ಟಿನ ವಿವರವಾದ ಯೋಜನಾ ವರದಿ (DPR) ನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಇತ್ತೀಚೆಗೆ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಅನುಮೋದನೆಗಳು ನ್ಯಾಯಾಂಗದಿಂದ ಬರಬೇಕಿರುವುದು ಅಲ್ಲ. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ದಿಂದ ಬರಬೇಕು ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು, ತಮಿಳುನಾಡಿನ ಮನವಿಯನ್ನು ತಪ್ಪಾಗಿ ಗ್ರಹಿಸಲಾಗಿದೆ, ರಾಜ್ಯವು ಆದೇಶವನ್ನು ಮೇಲ್ವಿಚಾರಣೆ ಮಾಡಲು ಅಧಿಕಾರ ಹೊಂದಿರುವ ತಜ್ಞರ ಸಮಿತಿಯನ್ನು ಸಂಪರ್ಕಿಸಬೇಕಾಗಿತ್ತು ಎಂದು ಹೇಳಿತು.
ಕೇಂದ್ರ ಜಲ ಆಯೋಗದ ನಿರ್ದೇಶನಗಳು ತಜ್ಞರ ಶಿಫಾರಸುಗಳನ್ನು ಆಧರಿಸಿವೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮೋದನೆಗಳು ವಿವರವಾದ ಯೋಜನಾ ವರದಿ ಅನುಮೋದನೆಗೆ ಪೂರ್ವಾಪೇಕ್ಷಿತವಾಗಿದೆ ಎಂದು ಪೀಠವು ಗಮನಿಸಿತು.
ತಮಿಳು ನಾಡು ಮನವಿ ತಿರಸ್ಕೃತ, ಕೋರ್ಟ್ ಹೇಳಿದ್ದೇನು?
ಬಳಕೆಯಾಗದ ಕುಡಿಯುವ ನೀರನ್ನು ವರ್ಗಾಯಿಸದಂತೆ ಕರ್ನಾಟಕಕ್ಕೆ ನಿರ್ದೇಶನಗಳನ್ನು ಕೋರಿ ತಮಿಳುನಾಡು ಮತ್ತೊಂದು ಅರ್ಜಿಯನ್ನು ಸಲ್ಲಿಸಿತ್ತು. ಆದೇಶಗಳನ್ನು ಜಾರಿಗೊಳಿಸದಿರುವ ಎಲ್ಲಾ ಆರೋಪಗಳನ್ನು ಕೇಂದ್ರವು ಸೂಚಿಸಿದ ಕಾವೇರಿ ಜಲವಿವಾದ ನಿರ್ವಹಣಾ ಅಧಿಕಾರಿಗಳ ಮುಂದೆ ಇಡಬೇಕು ಎಂದು ಹೇಳುತ್ತಾ ನ್ಯಾಯಾಲಯವ ಅರ್ಜಿ ಪುರಸ್ಕರಿಸಲು ನಿರಾಕರಿಸಿತು.
ಕಾವೇರಿ ಜಲಾನಯನ ಪ್ರದೇಶದ ನೀರಿನ ವಿಷಯದಲ್ಲಿ, ವಿವಾದವನ್ನು ಈ ನ್ಯಾಯಾಲಯ ನಿರ್ಧರಿಸಿದೆ. ಯಾವುದೇ ಸಮಸ್ಯೆಗಳನ್ನು , ಕಾವೇರಿ ನೀರು ನಿಯಂತ್ರಣ ಸಮಿತಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಕೇಂದ್ರ ಜಲ ಆಯೋಗದ ಮುಂದೆ ಎತ್ತಬಹುದು ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು, ಅಧಿಕಾರಿಗಳಿಗೆ ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಿದರು.
ನ್ಯಾಯಾಂಗ ನಿಂದನೆ ಎಚ್ಚರಿಕೆ
ಕರ್ನಾಟಕವು ಸಿಡಬ್ಲ್ಯುಸಿ ಅಥವಾ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಪಾಲಿಸಲು ವಿಫಲವಾದರೆ, ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಒಳಗಾಗುವ ಅಪಾಯವಿದೆ ಎಂದು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದೆ. ಕರ್ನಾಟಕವು ಎಲ್ಲಾ ನಿರ್ದೇಶನಗಳನ್ನು ಪಾಲಿಸಿದೆ ಎಂದು ಸಮರ್ಥಿಸಿಕೊಂಡಿತು, ತಮಿಳುನಾಡು ಎತ್ತಿರುವ ಅನೇಕ ಸಮಸ್ಯೆಗಳು ಉತ್ಪ್ರೇಕ್ಷವಾಗಿದೆ ಎಂದು ವಾದಿಸಿತು.
ವಿಚಾರಣೆಯಲ್ಲಿ ವಿವಾದದ ದೀರ್ಘ ಇತಿಹಾಸದ ಬಗ್ಗೆಯೂ ಟೀಕೆಗಳು ಬಂದವು. ಕರ್ನಾಟಕ-ತಮಿಳು ನಾಡು 50 ವರ್ಷಗಳಿಂದ ಕಾವೇರಿ ಜಲ ವಿವಾದ ಬಗ್ಗೆ ಹೋರಾಟ ನಡೆಸುತ್ತಿವೆ ಎಂದು ವಕೀಲರು ಗಮನಸೆಳೆದಾಗ, ಸಿಜೆಐ ಈ ನದಿ ತೀರದ ವಿವಾದಗಳು ಮುಂದುವರಿಯುತ್ತಲೇ ಇರುತ್ತವೆ, ನಾವು ಇಲ್ಲಿ ಇರುವುದಿಲ್ಲ ಎಂದು ಹೇಳಿದರು. ಮತ್ತೊಬ್ಬ ವಕೀಲರು ನದಿ ದೀರ್ಘವಾಗಿದ್ದರೆ ವಿವಾದಗಳು ದೀರ್ಘಕಾಲಿಕ ಎಂದು ವ್ಯಂಗ್ಯವಾಡಿದರು, ನ್ಯಾಯಾಲಯದಿಂದ ಲಘು ಪ್ರತಿಕ್ರಿಯೆ ಬಂದಿತು.
ರೈತರ ಸಂಘಟನೆಗಳು ನೀರು ಹಂಚಿಕೆಯ ಕುರಿತು ಅರ್ಜಿಗಳನ್ನು ಸಲ್ಲಿಸಿವೆ ಎಂದು ಸಿಜೆಐ ಹೇಳಿದರು. ಸಿಡಬ್ಲ್ಯುಸಿ ಶಿಫಾರಸುಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವಂತೆ ಕೋರಿ ಸಲ್ಲಿಸಲಾದ ಪಿಐಎಲ್ ಬಾಕಿ ಇದೆ ಎಂದರು. ಸಿಡಬ್ಲ್ಯೂಎಂಎ ಮತ್ತು ಸಿಡಬ್ಲ್ಯೂಆರ್ ಗಳು ಈ ಸಮಸ್ಯೆಯನ್ನು ನಿರ್ವಹಿಸಲು ಭಾರತ ಒಕ್ಕೂಟವು ರಚಿಸಿದ ಸಂಸ್ಥೆಗಳು ಎಂದು ನಾವು ಈ ಸಂದರ್ಭದಲ್ಲಿ ಮತ್ತೆ ಹೇಳುತ್ತಿದ್ದು, ಈ ಹಿನ್ನೆಲೆಯಲ್ಲಿ, ನಾವು ಯಾವುದೇ ಆದೇಶಗಳನ್ನು ನೀಡುವುದಿಲ್ಲ ಎಂದರು.
ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಆದೇಶಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕ ಉಪ ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಈ ತೀರ್ಪು ಕರ್ನಾಟಕಕ್ಕೆ ಹಿನ್ನಡೆಯಲ್ಲ, ಬದಲಿಗೆ ನ್ಯಾಯ ತಂದಿದೆ ಎಂದು ಹೇಳಿದರು. ಮೇಕೆದಾಟು ಕರ್ನಾಟಕದ ನ್ಯಾಯಯುತ ಯೋಜನೆ ಎಂದು ಕರೆದ ಅವರು, ಇದು ನಮ್ಮ ಹಕ್ಕು ಮತ್ತು ನಮ್ಮ ನೀರು. ನಾವು ತೊಂದರೆ ನೀಡುತ್ತಿಲ್ಲ. ತಮಿಳುನಾಡಿಗೆ ಲಾಭವಾಗಲಿದೆ. ಆದೇಶದ ಪ್ರಕಾರ ಅವರಿಗೆ ಸಾಕಷ್ಟು ನೀರು ಸಿಗುತ್ತದೆ. ನಾವು ಯೋಜನೆಯೊಂದಿಗೆ ಮುಂದುವರಿಯಬೇಕು. ಇದನ್ನು ನಮ್ಮ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇದು ಬೆಂಗಳೂರಿಗರ ವಿಜಯವಾಗಿದೆ ಎಂದು ಹೇಳಿದರು.
ತಮಿಳು ನಾಡು ಸರ್ಕಾರದ ಸಹಕಾರ ಕೋರಿದ ಅವರು, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಅವರಿಗೆ ಬೇರೆ ಆಯ್ಕೆ ಇಲ್ಲ. ಅವರು ನ್ಯಾಯ ಒದಗಿಸಬೇಕು ಎಂದರು.