ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿರುವ 'ಮಹಾಘಟಬಂಧನ್ ' ಮೈತ್ರಿಕೂಟದ ಪ್ರಮುಖ ಪಕ್ಷವಾದ ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ( RJD) ಶನಿವಾರ ತನ್ನ ಮೊದಲ ಪ್ರತಿಕ್ರಿಯೆ ನೀಡಿದ್ದು, ಸಾರ್ವಜನಿಕ ಜೀವನದಲ್ಲಿ ಏರಿಳಿತ ಅನಿವಾರ್ಯ ಎಂದು ಹೇಳಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆರ್ ಜೆಡಿ, ತನ್ನನ್ನು"ಬಡವರ ಪಕ್ಷ" ಎಂದು ಕರೆದುಕೊಂಡಿದೆ. ತೇಜಸ್ವಿ ಯಾದವ್ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಿದ ಪಕ್ಷ, ಸೋಲಿಗೆ ಯಾವುದೇ ದುಃಖವಿಲ್ಲ" ಎಂದು ಹೇಳಿದೆ.
ಸಾರ್ವಜನಿಕ ಸೇವೆ ಒಂದು ನಿರಂತರ ಪ್ರಕ್ರಿಯೆ, ಅಂತ್ಯವಿಲ್ಲದ ಪ್ರಯಾಣ! ಅದರಲ್ಲಿ ಏರಿಳಿತಗಳು ಅನಿವಾರ್ಯ. ಸೋಲಿಗ ದುಃಖವಿಲ್ಲ, ಗೆಲುವಿನಲ್ಲಿ ದುರಹಂಕಾರವಿಲ್ಲ! ರಾಷ್ಟ್ರೀಯ ಜನತಾದಳ ಬಡವರ ಪಕ್ಷ, ಅದು ಬಡವರ ನಡುವೆ ಧ್ವನಿ ಎತ್ತುತ್ತಲೇ ಇರುತ್ತದೆ!" ಎಂದು ಹೇಳಿಕೊಂಡಿದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ತನ್ನ ಇತಿಹಾಸದಲ್ಲಿ ಎರಡನೇ ಬಾರಿಗೆ ಅತ್ಯಂತ ಕಡಿಮೆ 25 ಸ್ಥಾನಗಳಿಗೆ ಕುಸಿದಿದ್ದು, ಜೆಡಿಯುನ ನಿತೀಶ್ ಕುಮಾರ್ ನೇತೃತ್ವದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವಿಗೆ ದಾರಿ ಮಾಡಿಕೊಟ್ಟಿದೆ. ತೇಜಸ್ವಿ ಯಾದವ್ ಅವರು ರಾಘೋಪುರ್ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದು, ಬಿಜೆಪಿಯ ಸತೀಶ್ ಕುಮಾರ್ ಅವರನ್ನು 14,532 ಮತಗಳ ಅಂತರದಿಂದ ಸೋಲಿಸಿದ್ದಾರೆ. ಅವರು ಕಳೆದ 10 ವರ್ಷಗಳಿಂದ ಇಲ್ಲಿಂದಲೇ ಗೆಲುತ್ತಿದ್ದಾರೆ. 2015 ಮತ್ತು 2020 ರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಕುಮಾರ್ ಅವರನ್ನು ಸೋಲಿಸಿದ್ದರು.
ಆದಾಗ್ಯೂ, ಮತಗಳ ಹಂಚಿಕೆಯಲ್ಲಿ ಆರ್‌ಜೆಡಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶೇ. 22.76 ಮತಗಳೊಂದಿಗೆ, ಬಿಜೆಪಿಯ ಶೇ. 20.90 ಮತ್ತು ಜೆಡಿ(ಯು)ನ ಶೇ. 18.92 ರಷ್ಟು ಮತಗಳನ್ನು ಮೀರಿಸಿದೆ. ಮತದಾನದ ದತ್ತಾಂಶದಲ್ಲಿನ ವ್ಯತ್ಯಾಸಗಳು ಮತ್ತು ಚುನಾವಣಾ ಆಯೋಗದ ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆ (SIR) ತಮ್ಮ ಸೋಲಿಗೆ ಕಾರಣ ಎಂದು ಕಾಂಗ್ರೆಸ್, ಎಡ ಪಕ್ಷಗಳನ್ನೊಳಗೊಂಡ ಮಹಾಘಟಬಂಧನ್‌ನ ಮಿತ್ರಪಕ್ಷಗಳು ಆರೋಪಿಸಿವೆ.
ಬಿಹಾರದ 243 ಸ್ಥಾನಗಳಲ್ಲಿ 202 ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್‌ಡಿಎ ಅದ್ಭುತ ಗೆಲುವು ಸಾಧಿಸಿದೆ. ಬಿಜೆಪಿ 89 ಸ್ಥಾನಗಳೊಂದಿಗೆ ಅತಿ ಹೆಚ್ಚು ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನಂತರ ಜೆಡಿಯು 85 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 2020 ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) 19 ಸ್ಥಾನಗಳನ್ನು ಗಳಿಸಿ ಗಮನಾರ್ಹ ಪರಿಣಾಮ ಬೀರಿದೆ.