ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ನವೆಂಬರ್ 10 ರಂದು ಸಂಭವಿಸಿದ ಕಾರು ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದ ಲುಕ್ಮಾನ್(50) ಮತ್ತು ವಿನಯ್ ಪಾಠಕ್(50) ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಗುರುವಾರ ಮತ್ತೊಬ್ಬ ಗಾಯಾಳು ಬಿಲಾಲ್ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಇತ್ತೀಚಿನ ಸಾವುನೋವುಗಳೊಂದಿಗೆ, ಕಾರು ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಈಗ 15 ಕ್ಕೆ ಏರಿದೆ. ಇನ್ನೂ ಅನೇಕರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಆಸ್ಪತ್ರೆಯಿಂದ ಇತ್ತೀಚಿನ ಸಾವುಗಳ ಬಗ್ಗೆ ಮಾಹಿತಿ ಪಡೆದಿರುವ ದೆಹಲಿ ಪೊಲೀಸರು, ಶೀಘ್ರದಲ್ಲೇ ಮರಣೋತ್ತರ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.