ಪಾಟ್ನಾ: ದಾಖಲೆಯ 10ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುದಿನ, ನಿತೀಶ್ ಕುಮಾರ್ ಶುಕ್ರವಾರ ತಮ್ಮ ಸಂಪುಟದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗೃಹ ಖಾತೆಯನ್ನು ಮಿತ್ರ ಪಕ್ಷ ಬಿಜೆಪಿಗೆ ಬಿಟ್ಟುಕೊಟ್ಟಿದ್ದಾರೆ.
ಈ ಹಿಂದಿನ ಎನ್‌ಡಿಎ ಸರ್ಕಾರಗಳಲ್ಲಿ ಸಾಂಪ್ರದಾಯಿಕವಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗೃಹ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಳ್ಳುತ್ತಿದ್ದರು. ಈ ಬಾರಿ ಬಿಹಾರದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಸಾಮ್ರಾಟ್ ಚೌಧರಿಗೆ ವಹಿಸಲಾಗಿದೆ.
ನಿತೀಶ್ ಕುಮಾರ್ ಅವರು ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರಿಗೆ ಗೃಹ ಖಾತೆ ನೀಡಿದ್ದು, ಮತ್ತೊಬ್ಬ ಬಿಜೆಪಿ ನಾಯಕ ಮಂಗಲ್ ಪಾಂಡೆ ಅವರಿಗೆ ಆರೋಗ್ಯ ಮತ್ತು ಕಾನೂನು ಖಾತೆಗಳನ್ನು ನೀಡಿದ್ದಾರೆ.
ಉಪಮುಖ್ಯಮಂತ್ರಿಯೂ ಆಗಿರುವ ವಿಜಯ್ ಕುಮಾರ್ ಸಿನ್ಹಾ ಅವರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಮತ್ತು ಭೂಸುಧಾರಣಾ ಖಾತೆಯನ್ನು ನೀಡಲಾಗಿದೆ.
ಮತ್ತೊಂದೆಡೆ, ಬಿಜೆಪಿಯ ಬಿಹಾರ ಘಟಕದ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಅವರನ್ನು ಕೈಗಾರಿಕಾ ಸಚಿವರನ್ನಾಗಿ ಮಾಡಲಾಗಿದೆ.
ಬಿಜೆಪಿಯ ನಿತಿನ್ ನಬಿನ್ ಅವರಿಗೆ ನಗರಾಭಿವೃದ್ಧಿ, ವಸತಿ ಮತ್ತು ರಸ್ತೆ ನಿರ್ಮಾಣ ಇಲಾಖೆಗಳನ್ನು ಹಂಚಿಕೆ ಮಾಡಿದರೆ, ರಾಮ್ ಕೃಪಾಲ್ ಯಾದವ್ ಅವರಿಗೆ ಕೃಷಿ ಖಾತೆ ನೀಡಲಾಗಿದೆ.
ಸಂಜಯ್ ಸಿಂಗ್ ಟೈಗರ್ ಮತ್ತು ನಾರಾಯಣ್ ಪ್ರಸಾದ್ ಅವರಿಗೆ ಕ್ರಮವಾಗಿ ಕಾರ್ಮಿಕ ಸಂಪನ್ಮೂಲ ಮತ್ತು ವಿಪತ್ತು ನಿರ್ವಹಣಾ ಖಾತೆಗಳನ್ನು ನೀಡಲಾಗಿದೆ.
ಎಲ್ ಜೆಪಿಯ ಇಬ್ಬರು ಸಚಿವರಿಗೆ ಕಬ್ಬು ಕೈಗಾರಿಕೆಗಳು ಮತ್ತು ಸಾರ್ವಜನಿಕ ಆರೋಗ್ಯ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
ಇನ್ನೂ ಎಂಟು ಸಚಿವರಿಗೆ ಖಾತೆ ಹಂಚಿಕೆ ಬಾಕಿ ಇದ್ದು, ಉಳಿದವರ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.