ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ರಾಜ್ಯ ಸರ್ಕಾರದ ಇಬ್ಬರು ಸಚಿವರ ಸಂಬಂಧಿಕರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು, ಪ್ರತಿಪಕ್ಷಗಳು ಬಿಜೆಪಿ ಹಣ ಬಲ ಮತ್ತು ಬೆದರಿಕೆಯಿಂದ ಇತರ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡಿದೆ ಎಂದು ಆರೋಪಿಸಿವೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸೋದರಸಂಬಂಧಿ ಅಲ್ಹಾದ್ ಕಲೋಟಿ ಚಿಕಲ್ದಾರ ನಗರ ಪಂಚಾಯತ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಶ್ಚರ್ಯಕರ ರೀತಿಯಲ್ಲಿ ಒಬ್ಬರಲ್ಲ, ಒಂಬತ್ತು ವಿರೋಧ ಪಕ್ಷಗಳ ಅಭ್ಯರ್ಥಿಗಳು ಕೊನೆಯ ಕ್ಷಣದಲ್ಲಿ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಸಚಿವೆ ಯಶೋಮತಿ ಠಾಕೂರ್ ಅವರು ಸಿಎಂ ಫಡ್ನವೀಸ್ ತಮ್ಮ ಸಂಬಂಧಿಯನ್ನು ಅವಿರೋಧವಾಗಿ ಆಯ್ಕೆ ಮಾಡಲು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆಡಳಿತ ಪಕ್ಷವು ಇತರ ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಲು ಹಣ ಬಲ ಮತ್ತು ಬೆದರಿಕೆ ಹಾಕುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸಿಎಂ ಫಡ್ನವೀಸ್ ಅವರ ಆಪ್ತರಾಗಿರುವ ಬಿಜೆಪಿ ಸಚಿವ ಗಿರೀಶ್ ಮಹಾಜನ್ ಕೂಡ ಜಾಮ್ನೇರ್ ನಗರ ಪಂಚಾಯತ್ ಅಧ್ಯಕ್ಷರಾಗಿ ತಮ್ಮ ಪತ್ನಿ ಸಾದನಾ ಮಹಾಜನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕುತೂಹಲಕಾರಿ ವಿಚಾರ ಎಂದರೆ ಕಣದಲ್ಲಿ ಉಳಿದಿದ್ದ ಒಬ್ಬ ಅಭ್ಯರ್ಥಿಯ ನಾಮಪತ್ರವನ್ನು ಪರಿಶೀಲನೆಯ ಸಮಯದಲ್ಲಿ ರದ್ದುಗೊಳಿಸಲಾಗಿದೆ. ಆದರೆ ಎನ್‌ಸಿಪಿ ಎಸ್‌ಪಿ ಮತ್ತು ಕಾಂಗ್ರೆಸ್‌ನ ಇತರ ಇಬ್ಬರು ಅಭ್ಯರ್ಥಿಗಳು ಆಶ್ಚರ್ಯಕರವಾಗಿ ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡರು.
ಮತ್ತೊಂದು ಘಟನೆಯಲ್ಲಿ, ಧುಲೆ ಜಿಲ್ಲೆಯ ದೋಂಧಾಸಿಯ ನಗರ ಪಂಚಾಯತ್ ಚುನಾವಣೆಯಲ್ಲಿ, ಬಿಜೆಪಿ ಸಚಿವ ಜೈಕುಮಾರ್ ರಾವಲ್ ಅವರ ತಾಯಿ ನಯನ್ ಕುವಾರ್ ರಾವಲ್ ಅವರು ಇತರ 26 ಕೌನ್ಸಿಲರ್‌ಗಳೊಂದಿಗೆ ಅವಿರೋಧವಾಗಿ ಆಯ್ಕೆಯಾದರು. ಶರ್ಯು ಬವಾಸ್ಕರ್ ಅವರು ಬಿಜೆಪಿ ಸಚಿವರ ತಾಯಿಯ ವಿರುದ್ಧ ನಾಮಪತ್ರ ಸಲ್ಲಿಸಿದ್ದರು. ಆದರೆ ಅವರ ಫಾರ್ಮ್‌ನಲ್ಲಿನ ತಾಂತ್ರಿಕ ದೋಷಗಳು ಮತ್ತು ನಗರ ಪಂಚಾಯತ್‌ನ ಬಾಕಿ ಪಾವತಿಸದ ಕಾರಣ ಅವರ ನಾಮಪತ್ರವನ್ನು ರದ್ದುಗೊಳಿಸಲಾಯಿತು.