ಚೆನ್ನೈ: 2026 ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಆಡಳಿತಾರೂಢ ಡಿಎಂಕೆ ಜೊತೆ ಸೀಟು ಹಂಚಿಕೆ ಕುರಿತು ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಐದು ಸದಸ್ಯರ ಸಮಿತಿ ರಚಿಸಿದ್ದಾರೆ.
ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಸೆಲ್ವಪೆರುಂತಗೈ ಅವರು ಶನಿವಾರ ಈ ವಿಷಯ ತಿಳಿಸಿದ್ದಾರೆ.
ತಮಿಳುನಾಡು ಮತ್ತು ಪುದುಚೇರಿಯ ಪಕ್ಷದ ಉಸ್ತುವಾರಿ ಗಿರೀಶ್ ಚೋಡಂಕರ್ ಅವರು ಸಮಿತಿಯ ನೇತೃತ್ವ ವಹಿಸಲಿದ್ದು, ಸೆಲ್ವಪೆರುಂತಗೈ ಮತ್ತು ಶಾಸಕಾಂಗ ಪಕ್ಷದ ನಾಯಕ ಎಸ್. ರಾಜೇಶ್‌ಕುಮಾರ್ ಕೂಡ ಈ ಸಮಿತಿಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಸಮಿತಿ ರಚಿಸಿದ ಪಕ್ಷದ ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸಿದ ಹಿರಿಯ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಮತ್ತು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರು, ಈ ಕ್ರಮವು ಇಂಡಿಯಾ ಬಣದ ಏಕತೆಯನ್ನು ಬಲಪಡಿಸುತ್ತದೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಚುನಾವಣೆಗೆ ಮುನ್ನ ಕಾಂಗ್ರೆಸ್ ಮೈತ್ರಿಕೂಟದ ಬಗ್ಗೆ ಹರಡುತ್ತಿರುವ ವದಂತಿಗಳಿಗೆ ಈ ಘೋಷಣೆ ಅಂತ್ಯ ಹಾಡುತ್ತದೆ ಎಂದು ಚಿದಂಬರಂ ಹೇಳಿದ್ದಾರೆ.
ಕಾಂಗ್ರೆಸ್ ಡಿಎಂಕೆ ಜೊತೆಗಿನ ಮೈತ್ರಿ ಮುರಿದುಕೊಂಡು ನಟ-ರಾಜಕಾರಣಿ ವಿಜಯ್ ನೇತೃತ್ವದ ತಮಿಳುಗ ವೆಟ್ರಿ ಕಳಗಂ(ಟಿವಿಕೆ) ಜೊತೆ ಕೈಜೋಡಿಸುವ ಬಗ್ಗೆ ಮಾತುಕತೆ ನಡೆಯುತ್ತಿರುವುದರಿಂದ ಈ ಸಮಿತಿ ರಚನೆ ಹೆಚ್ಚು ಮಹತ್ವ ಪಡೆದುಕೊಂಡಿದೆ.