ಚಂಡೀಗಢ: ಪಂಜಾಬ್ ಪೊಲೀಸರು ಐವರನ್ನು ಬಂಧಿಸುವುದರೊಂದಿಗೆ ಗ್ಯಾಂಗ್ ಸ್ಟರ್- ಟೆರರ್ ಮಾಡ್ಯುಲ್ ಪತ್ತೆ ಹಚ್ಚಿದ್ದಾರೆ. ಕಳೆದ ಮೂರು ವಾರಗಳಲ್ಲಿ ಅಂತಹ ಏಳು ಮಾಡ್ಯೂಲ್‌ಗಳನ್ನು ಪತ್ತೆ ಹಚ್ಚಲಾಗಿದೆ.
ಬಂಧಿತರನ್ನು ಪಾಕಿಸ್ತಾನ, ಕೆನಡಾ ಮತ್ತು ಯುರೋಪ್‌ನಿಂದ ಕಾರ್ಯನಿರ್ವಹಿಸುತ್ತಿರುವ ಹ್ಯಾಂಡ್ಲರ್‌ಗಳು ಹತ್ಯೆಯ ಕೆಲಸಕ್ಕೆ ನಿಯೋಜಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ತನ್ನ ಹ್ಯಾಂಡ್ಲರ್‌ಗಳ ಮೂಲಕ, ಹ್ಯಾಂಡ್ ಗ್ರೆನೇಡ್‌ಗಳ ನಿರ್ವಹಣೆ ಮತ್ತು ಸ್ಫೋಟಿಸುವ ಕುರಿತು ಯೂಟ್ಯೂಬ್ ವೀಡಿಯೊಗಳ ಮೂಲಕ ತರಬೇತಿ ನೀಡುತಿತ್ತು ಎಂದು ಮೂಲಗಳು ತಿಳಿಸಿವೆ.
ಬಂಧಿತರ ಮೊಬೈಲ್ ಫೋನ್ ಗಳಿಂದ ಈ ವಿಡಿಯೋಗಳು ಮತ್ತು ವಾಟ್ಸಾಪ್ ಮೂಲಕ ಕಳುಹಿಸಲಾದ ನಂಬರ್ ಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ.
ಬಂಧಿತರಲ್ಲಿ ಇಬ್ಬರು ಲುಧಿಯಾನದಲ್ಲಿ ಭಯೋತ್ಪಾದಕ ದಾಳಿ ನಡೆಸಲು ರಾಜಸ್ಥಾನದಿಂದ ಬಂದಿದ್ದರು. ಇತರ ಮೂವರು ಪಂಜಾಬ್‌ನ ಫಿರೋಜ್‌ಪುರದವರಾಗಿದ್ದಾರೆ. ಆರೋಪಿಗಳಿಗೆ ಪಾಕಿಸ್ತಾನ ಮೂಲದ ಹ್ಯಾಂಡ್ಲರ್ ಜಸ್ವೀರ್ ಅಲಿಯಾಸ್ ಚೌಧರಿ ಗ್ರೆನೇಡ್ ದಾಳಿ ನಡೆಸುವ ಕೆಲಸ ನಿಯೋಜಿಸಿದ್ದ.
ಗ್ರೆನೇಡ್ ದಾಳಿ ನಡೆಸಲು ಬಿಹಾರ, ರಾಜಸ್ಥಾನ ಮತ್ತು ಮಹಾರಾಷ್ಟ್ರದ ಯುವಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಅವರ ವಿದೇಶಿ ಸಂಪರ್ಕಗಳನ್ನು ಪತ್ತೆಹಚ್ಚಲು ರಾಷ್ಟ್ರೀಯ ತನಿಖಾ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಲುಧಿಯಾನ ಪೊಲೀಸ್ ಆಯುಕ್ತ ಸ್ವಪನ್ ಶರ್ಮಾ ತಿಳಿಸಿದ್ದಾರೆ.