ಅಹಮದಾಬಾದ್: 26 ವರ್ಷದ ಬಿಎಲ್‌ಒ ಮತ್ತು ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ತಾಂತ್ರಿಕ ಸಹಾಯಕಿ ದಿನಕಲ್ ಶಿಂಗೋಡವಾಲಾ ಅವರು ತಮ್ಮ ಮನೆಯ ಬಾತ್ ರೂಮ್ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಬಾತ್ ರೂಮ್ನಲ್ಲಿ ಗ್ಯಾಸ್ ಗೀಸರ್ ಇದ್ದುದರಿಂದ, ಸಾವಿಗೆ ಅನಿಲ ಉಸಿರಾಡುವಿಕೆ ಅಥವಾ ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿರಬಹುದು ಎಂದು ಪೊಲೀಸ್ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ, ರಾಜ್ಯಾದ್ಯಂತ ಬಿಎಲ್‌ಒ ಕೆಲಸದ ಒತ್ತಡಕ್ಕೆ ಸಂಬಂಧಿಸಿದ ಸಾವುಗಳು ತೀವ್ರ ಕಳವಳವನ್ನು ಹುಟ್ಟುಹಾಕಿವೆ.
ಓಲ್ಪಾಡ್ ತಾಲೂಕಿನಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ ದಿನಕಲ್ ಅವರು, ಸೂರತ್ ಮುನ್ಸಿಪಲ್ ಕಾರ್ಪೊರೇಷನ್‌ನ ವರಾಚಾ ವಲಯದಲ್ಲಿ ತಾಂತ್ರಿಕ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದರು ಮತ್ತು SIR ಕಾರ್ಯಾಚರಣೆಗಾಗಿ ಬೂತ್ ಮಟ್ಟದ ಅಧಿಕಾರಿ(BLO)ಯಾಗಿ ಹೆಚ್ಚುವರಿ ಜವಾಬ್ದಾರಿಯನ್ನು ಸಹ ನಿರ್ವಹಿಸುತ್ತಿದ್ದರು.
ದಿನಕಲ್ ಅವರು ಬಾತ್ ರೂಮ್ನಲ್ಲಿ ಕುಸಿದು ಬಿದ್ದ ನಂತರ ಅವರನ್ನು ಉಳಿಸಲು ತೀವ್ರ ಪ್ರಯತ್ನಗಳು ನಡೆದವು. ಅವರ ಕುಟುಂಬವು ಅವರನ್ನು ಸೂರತ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿತು. ಆದರೆ ತಕ್ಷಣದ ಚಿಕಿತ್ಸೆಯ ಹೊರತಾಗಿಯೂ, ಯುವ ಅಧಿಕಾರಿ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದರು. ಅವರ ಸಾವು ಆಕಸ್ಮಿಕವೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
BLO ದಿನಕಲ್ ಅವರ ಕೆಲಸದ ವರದಿ ತುಂಬಾ ಚೆನ್ನಾಗಿತ್ತು. ಅವರು AIR ಕಾರ್ಯಗಳನ್ನು ಬಹಳ ಬೇಗನೆ ಪೂರ್ಣಗೊಳಿಸಿದರು ಮತ್ತು ಈಗಾಗಲೇ ಅವರಿಗೆ ನಿಯೋಜಿಸಲಾದ ಕೆಲಸದ ಶೇ. 45 ರಷ್ಟು ಪೂರ್ಣಗೊಳಿಸಿದ್ದರು" ಎಂದು ಉಪ ಕಲೆಕ್ಟರ್ ನೇಹಾ ಸವಾನಿ ತಿಳಿಸಿದ್ದಾರೆ.
BLO ಹಠಾತ್ ಸಾವುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶಿಕ್ಷಕರಲ್ಲಿ ಆತ್ಮಹತ್ಯೆ ಮತ್ತು ಹೃದಯಾಘಾತಕ್ಕೆ ಸಂಬಂಧಿಸಿದ ಸಾವಿಗೆ ಕೆಲಸದ ಒತ್ತಡವೇ ಕಾರಣ ಎಂದು ಆರೋಪಿಸಲಾಗುತ್ತಿದೆ.
ಈ ಸಂಬಂಧ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.