ನವದೆಹಲಿ: ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಸೋಮವಾರ ರಾಷ್ಟ್ರಪತಿ ಭವನದಲ್ಲಿ ತಮ್ಮ ಉತ್ತರಾಧಿಕಾರಿ ಸೂರ್ಯಕಾಂತ್ ಅವರಿಗೆ ಅಧಿಕೃತ ಮರ್ಸಿಡಿಸ್-ಬೆನ್ಜ್ ಕಾರನ್ನು ಬಿಟ್ಟು ಇತರರಿಗೆ ಮಾದರಿಯಾದರು.
ನವೆಂಬರ್ 23 ರಂದು ನಿವೃತ್ತರಾದ ನ್ಯಾಯಮೂರ್ತಿ ಗವಾಯಿ ಅವರು ಇಂದು ಅಧಿಕೃತ ಸರ್ಕಾರಿ ಕಾರಿನಲ್ಲಿ ರಾಷ್ಟ್ರಪತಿ ಭವನ ತಲುಪಿದರು. ಆದರೆ ಸಮಾರಂಭದ ನಂತರ ಸರ್ಕಾರಿ ಕಾರನ್ನು ನೂತನ CJIಗೆ ಬಿಟ್ಟುಕೊಟ್ಟು ತಾವು ತಮ್ಮ ವೈಯಕ್ತಿಕ ವಾಹನದಲ್ಲಿ ನಿವಾಸಕ್ಕೆ ತೆರಳಿದರು.
"ಪ್ರಮಾಣವಚನ ಸಮಾರಂಭದ ನಂತರ, ನ್ಯಾಯಮೂರ್ತಿ ಗವಾಯಿ ಅವರು, ಮುಖ್ಯ ನ್ಯಾಯಮೂರ್ತಿಗಾಗಿ ಗೊತ್ತುಪಡಿಸಿದ ಅಧಿಕೃತ ವಾಹನವನ್ನು ಬಿಟ್ಟು ರಾಷ್ಟ್ರಪತಿ ಭವನದಿಂದ ಪರ್ಯಾಯ ವಾಹನದಲ್ಲಿ ಮರಳಿದರು. ನೂತನ ಸಿಜೆಐ, ಸುಪ್ರೀಂ ಕೋರ್ಟ್‌ಗೆ ಹೋಗಲು ಅಧಿಕೃತ ಕಾರು ಲಭ್ಯವಾಗುವಂತೆ ನೋಡಿಕೊಂಡಿದ್ದಾರೆ" ಎಂದು ಗವಾಯಿ ಅವರ ಆಪ್ತರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ನಡೆದ ಸಂಕ್ಷಿಪ್ತ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 53ನೇ ಸಿಜೆಐ ಆಗಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಪ್ರಮಾಣವಚನ ಬೋಧಿಸಿದರು. ದೇವರ ಹೆಸರಿನಲ್ಲಿ ಹಿಂದಿಯಲ್ಲಿ ಅವರು ಪ್ರಮಾಣವಚನ ಸ್ವೀಕರಿಸಿದರು.