ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬೂತ್ ಮಟ್ಟದ ಅಧಿಕಾರಿ(ಬಿಎಲ್ಒ)ಗಳ ಮೇಲೆ ಅತಿಯಾದ ಒತ್ತಡ ಹೇರುತ್ತಿರುವುದನ್ನು ವಿರೋಧಿಸಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಬಿಎಲ್ಒಗಳ ಇಡೀ ರಾತ್ರಿ ಧರಣಿ ನಡೆಸಿದರು.
ಎಸ್‌ಐಆರ್ ಸಮಯದಲ್ಲಿ 'ನಿರ್ವಹಿಸಲಾಗದ ಕೆಲಸದ ಹೊರೆ' ಖಂಡಿಸಿ ಪ್ರತಿಭಟನೆ ನಡೆಸಿದ ಬಿಎಲ್ಒಗಳು, ಸಿಇಒ ಮನೋಜ್ ಕುಮಾರ್ ಅಗರ್ವಾಲ್ ಅವರು ತಮ್ಮನ್ನು ಭೇಟಿ ಮಾಡಿ ಮನವಿ ಸ್ವೀಕರಿಸುವವರೆಗೆ ಸ್ಥಳದಿಂದ ಹೊರಡುವುದಿಲ್ಲ ಎಂದು ಪಟ್ಟು ಹಿಡಿದರು.
ಹಲವು ಬಿಎಲ್ಒಗಳು ಸೋಮವಾರ ಸಂಜೆಯಿಂದ ಪ್ರತಿಭಟನೆ ನಡೆಸುತ್ತಿದ್ದು, ಉತ್ತರ ಕೋಲ್ಕತ್ತಾದ ಕಾಲೇಜು ಚೌಕದಿಂದ ಸಿಇಒ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಹೊಸದಾಗಿ ರಚಿಸಲಾದ ಬಿಎಲ್‌ಒ ಅಧಿಕಾರ ರಕ್ಷಾ ಸಮಿತಿಯ ಸದಸ್ಯರು ಸೋಮವಾರ ಮಧ್ಯಾಹ್ನದಿಂದ ಇಡೀ ರಾತ್ರಿ ಧರಣಿ ನಡೆಸಿದರು. ಅಗರ್ವಾಲ್ ಅವರು ವೈಯಕ್ತಿಕವಾಗಿ ತಮ್ಮ ನಿಯೋಗವನ್ನು ಭೇಟಿ ಮಾಡುವವರೆಗೆ ಧರಣಿ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆಯ ಅಡಿಯಲ್ಲಿ 'ಅತಿಯಾದ ಕೆಲಸದ ಒತ್ತಡ' ಮತ್ತು ಇದು 'ಅಮಾನವೀಯ ಕೆಲಸದ ಹೊರೆ' ಎಂದು ಪ್ರತಿಭಟನಾಕಾರರು ಟೀಕಿಸಿದ್ದಾರೆ.
ದೀರ್ಘ ಬಿಕ್ಕಟ್ಟಿನ ನಂತರ, ಪೊಲೀಸರು 13 ಸದಸ್ಯರ ನಿಯೋಗವನ್ನು ಮನವಿ ಸಲ್ಲಿಸಲು ಇಸಿಒ ಕಚೇರಿ ಪ್ರವೇಶಿಸಲು ಅವಕಾಶ ಮಾಡಿಕೊಟ್ಟರು. ಇದು ಸ್ವಲ್ಪ ಸಮಯದವರೆಗೆ ಉದ್ವಿಗ್ನತೆಯನ್ನು ಕಡಿಮೆ ಮಾಡಿತು.
ಸೋಮವಾರ, ಮನವಿ ಸ್ವೀಕರಿಸಲು ನನಗೆ 'ಸಾಧ್ಯವಾಗಿಲ್ಲ'. ಆದರೆ ಇಬ್ಬರು ಉಪ ಸಿಇಒಗಳು ಈ ಉದ್ದೇಶಕ್ಕಾಗಿ ಲಭ್ಯವಿದ್ದಾರೆ ಎಂದು ಅಗರ್ವಾಲ್ ಅವರು ವರದಿಗಾರರಿಗೆ ತಿಳಿಸಿದ್ದಾರೆ.