ಚಂಡೀಗಢ: ಹರಿಯಾಣದ ರೋಹ್ಟಕ್‌ನ ಬ್ಯಾಸ್ಕೆಟ್‌ಬಾಲ್ ಅಂಕಣದಲ್ಲಿ ಅಭ್ಯಾಸದ ಸಮಯದಲ್ಲಿ ಕಬ್ಬಿಣದ ಕಂಬ ಎದೆಯ ಮೇಲೆ ಬಿದ್ದು ರಾಷ್ಟ್ರ ಮಟ್ಟದ ಆಟಗಾರ ಸಾವಿಗೀಡಾಗಿರುವ ಧಾರುಣ ಘಟನೆ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ನಡೆದ ಈ ದುರಂತ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಬ್ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ 16 ವರ್ಷದ ಹಾರ್ದಿಕ್ ಸಾವಿಗೀಡಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಕಂಬ ಕುಸಿದು ಬೀಳಲು ಕಾರಣವಾದ ಸಂದರ್ಭಗಳು, ಉಪಕರಣಗಳ ಸ್ಥಿತಿ ಸೇರಿದಂತೆ ಎಲ್ಲವನ್ನೂ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಮೊದಲು ಈ ವಿಷಯಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಸಂಗ್ರಹಿಸುವುದಾಗಿ ಹೇಳಿದರು.
ಸಿಸಿಟಿವಿ ದೃಶ್ಯಾವಳಿಯಲ್ಲಿ 16 ವರ್ಷದ ಬಾಲಕ ಕಬ್ಬಿಣದ ಕಂಬದ ಬಳಿ ಜಂಪ್ ಮಾಡಿ ಬ್ಯಾಸ್ಕೆಟ್ ಹಿಡಿದು ನೇತಾಡಲು ಯತ್ನಿಸಿದಾಗ, ಕಂಬದ ಅರ್ಧಭಾಗ ಆತನ ಮೇಲೆ ಬಿದ್ದಿದೆ. ಕೂಡಲೇ ಅಲ್ಲೇ ಇದ್ದ ಇತರ ಆಟಾಗಾರರು ಕಂಬವನ್ನು ಎತ್ತಿಹಿಡಿದು ಆತನನ್ನು ರಕ್ಷಿಸಿದ್ದಾರೆ. ಈ ವೇಳೆ ಪೂರ್ತಿ ಕಂಬ ಕೆಳಗೆ ಬಿದ್ದಿದೆ.
ಲಖನ್ ಮಜ್ರಾ ಗ್ರಾಮದ ಕ್ರೀಡಾ ಸಂಕೀರ್ಣದಲ್ಲಿ ಅಂಕಣದ ಬದಿಯಲ್ಲಿ ಕುಳಿತಿದ್ದ ಇತರ ಆಟಗಾರರು ಹಾರ್ದಿಕ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಲ್ಲಿ ಅವರು ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ SHO ಸಮರ್ಜೀತ್ ಸಿಂಗ್ ತಿಳಿಸಿದ್ದಾರೆ.