ಎಐಎಡಿಎಂಕೆಯಿಂದ ಉಚ್ಚಾಟಿತರಾದ ಹಿರಿಯ ನಾಯಕ ಕೆ.ಎ. ಸೆಂಗೋಟ್ಟೈಯನ್, ಗೋಬಿಚೆಟ್ಟಿಪಾಳ್ಯಂ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇಂದು ಗುರುವಾರ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಔಪಚಾರಿಕವಾಗಿ ಸೇರ್ಪಡೆಗೊಂಡರು.
ಟಿವಿಕೆ ರಚನೆಯಾದ ನಂತರ ಸೆಂಗೋಟ್ಟೈಯನ್ ಅವರ ಸೇರ್ಪಡೆಯನ್ನು ಅತ್ಯಂತ ಮಹತ್ವದ ಪಕ್ಷಾಂತರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತಿದೆ. ಒಂಬತ್ತು ಬಾರಿ ಶಾಸಕರಾಗಿದ್ದ ಅವರು ತಮ್ಮ ರಾಜೀನಾಮೆ ಪತ್ರವನ್ನು ವಿಧಾನಸಭಾ ಸ್ಪೀಕರ್ ಎಂ. ಅಪ್ಪಾವು ಅವರಿಗೆ ಸೆಕ್ರೆಟರಿಯೇಟ್‌ನಲ್ಲಿ ನಿನ್ನೆ ಸಲ್ಲಿಸಿದ್ದರು.
ಸೆಂಗೋಟ್ಟೈಯನ್ ಸೆಪ್ಟೆಂಬರ್ 5 ರಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ವಿರುದ್ಧ ಬಹಿರಂಗವಾಗಿ ಬಂಡಾಯವೆದ್ದಿದ್ದರು. ಮುಂದಿನ ಚುನಾವಣಾ ಸೋಲುಗಳನ್ನು ತಡೆಯಲು ಎಐಎಡಿಎಂಕೆ ಪಕ್ಷಕ್ಕೆ ಎಲ್ಲಾ ಉಚ್ಚಾಟಿತ ನಾಯಕರಾದ ಓ ಪನ್ನೀರಸೆಲ್ವಂ, ಟಿಟಿವಿ ದಿನಕರನ್ ಮತ್ತು ವಿಕೆ ಶಶಿಕಲಾ ಅವರನ್ನು ಮರಳಿ ಕರೆತರುವುದು ಅತ್ಯಗತ್ಯ ಎಂದು ಹೇಳಿದ್ದರು. ಶಿಸ್ತಿನ ಕ್ರಮವಾಗಿ ಅವರನ್ನು ತಕ್ಷಣವೇ ಪಕ್ಷದ ಹುದ್ದೆಗಳಿಂದ ತೆಗೆದುಹಾಕಲಾಯಿತು.
ಉಚ್ಚಾಟನೆಯಾದ ಕೂಡಲೇ, ಸೆಂಗೋಟ್ಟೈಯನ್ ಅವರು ನ್ಯಾಯಾಲಯದಲ್ಲಿ ನಿರ್ಧಾರವನ್ನು ಪ್ರಶ್ನಿಸುವುದಾಗಿ ಘೋಷಿಸಿದ್ದರು. ತಮ್ಮ ಉಚ್ಛಾಟನೆ ಅಸಂವಿಧಾನಿಕ ಮತ್ತು ಸರ್ವಾಧಿಕಾರಿ ಧೋರಣೆ ಎಂದು ಕರೆದುಕೊಂಡಿದ್ದರು.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಟೀಕಿಸಿ ಪಕ್ಷವನ್ನು ಸರ್ವಾಧಿಕಾರಿ ಅಧಿಕಾರದಿಂದ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.