ನವದೆಹಲಿ: ಭಾರತೀಯ ವಿಡಿಯೋವೊಂದು ಮೊದಲ ಬಾರಿಗೆ ಯುಟ್ಯೂಬ್‌ನಲ್ಲಿ 5 ಬಿಲಿಯನ್- ಅಂದರೆ 500 ಕೋಟಿ ವೀಕ್ಷಣೆ ಪಡೆದು ಹೊಸ ದಾಖಲೆ ಮಾಡಿದೆ. ಆ ವಿಡಿಯೋ ಯಾವುದು ಅಂತೀರಾ ಬೇರ್ಯಾವುದೂ ಅಲ್ಲ, 'ಶ್ರೀ ಹನುಮಾನ್ ಚಾಲೀಸಾ'ದ ವಿಡಿಯೋ.
ದೇಶದ ಪ್ರಮುಖ ಸಂಗೀತ ಸಂಸ್ಥೆಯಾದ ಟಿ-ಸೀರೀಸ್ (T- Series) 14 ವರ್ಷಗಳ ಹಿಂದೆ ಹೊರತಂದಿದ್ದ ಆಲ್ಬಂನ ವಿಡಿಯೋ ಇದು. ಗುಲ್ಶನ್ ಕುಮಾರ್ ಅಭಿನಯದ ಮತ್ತು ಹರಿಹರನ್ ಹಾಡಿರುವ ಈ ಭಕ್ತಿಗೀತೆಯು ಜಾಗತಿಕವಾಗಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋಗಳಲ್ಲಿ ಒಂದಾಗಿದೆ.
ಆಂಜನೇಯ ಸ್ವಾಮಿಯ ಮಂತ್ರಗಳಲ್ಲಿ ಹನುಮಾನ್ ಚಾಲೀಸಾವು ಅತ್ಯಂತ ಪರಿಣಾಮಕಾರಿ ಹಾಗೂ ಪ್ರಭಾವಶಾಲಿ ಸ್ತೋತ್ರವೆಂದು ಪರಿಗಣಿಸಲಾಗುತ್ತದೆ. ಹನುಮಂತ ಚಿರಂಜೀವಿ ಎಂಬ ನಂಬಿಕೆಯಿದೆ. ಹೀಗಾಗಿ ಈಗಲೂ ಹನುಮಂತ ಮರೆಯಲ್ಲಿದ್ದುಕೊಂಡು ಭಕ್ತರನ್ನು ಸಂಕಷ್ಟದಿಂದ ಪಾರು ಮಾಡುತ್ತಿದ್ದಾನೆ ಎನ್ನುವ ನಂಬಿಕೆಯಿಂದಲೇ ಈತನನ್ನು ‘ಕಲಿಯುಗದ ದೇವರು’ ಎಂದು ಕರೆಯಲಾಗುತ್ತದೆ. ಆದ್ದರಿಂದಲೇ ಪ್ರತಿನಿತ್ಯ ಲಕ್ಷಾಂತರ ಜನರು ಹನುಮಾನ್ ಚಾಲೀಸಾವನ್ನು ಪಠಿಸುತ್ತಾರೆ.
ಈ ಹನುಮಾನ್ ಚಾಲೀಸಾವನ್ನು ಭಾರತದವರು ಮತ್ತು ವಿಶ್ವದ ಎಲ್ಲೆಡೆಯ ಹನುಮಾನ್ ಭಕ್ತರು ಮತ್ತೆ ಮತ್ತೆ ಪ್ಲೇ ಮಾಡಿ ಕೇಳುತ್ತಲೇ ಇರುತ್ತಾರೆ.
ಹಲವು ಮನೆಗಳಲ್ಲಿ ಇದನ್ನು ಬೆಳಗ್ಗೆ ಹಾಗೂ ಸಂಜೆ ಮರಳಿ ಮರಳಿ ಪ್ಲೇ ಮಾಡುವ ಪರಿಪಾಠವಿದೆ. ಕೆಲವರು ರಾತ್ರಿ ಮಲಗುವ ಮುನ್ನ ಇದನ್ನು ಕೇಳುತ್ತಾರೆ. ಹನುಮಾನ್ ಚಾಲೀಸಾ ದುಷ್ಟಶಕ್ತಿಗಳಿಂದ ತಮ್ಮನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಭಾರತೀಯರದ್ದಾಗಿದೆ. ಹೀಗಾಗಿ ಇದರೊಂದಿಗೆ ಧಾರ್ಮಿಕ ಭಾವನೆಯೂ ತಳುಕು ಹಾಕಿಕೊಂಡಿದೆ.
40 ಪದ್ಯಗಳ ಸ್ತೋತ್ರವಾದ ಹನುಮಂತ ಚಾಲೀಸಾ ಹನುಮನ ಜೀವನ, ಸಾಧನೆಗಳು, ಶಕ್ತಿ ಮತ್ತು ಬುದ್ಧಿವಂತಿಕೆಯ ಬಗ್ಗೆ ಇರುವ ಹಾಡು. ತುಳಸಿದಾಸರು ಬರೆದಿರುವ ಈ ಶ್ಲೋಕಾವಳಿ ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಪಸರಿಸಿದ್ದು, ಯೂಟ್ಯೂಬ್‌ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ.
ಟಿ-ಸೀರೀಸ್ ಯೂಟ್ಯೂಬ್‌ನಲ್ಲಿ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾಗಿದ್ದ ಹನುಮಾನ್ ಚಾಲೀಸಾ ಬರೋಬ್ಬರಿ 500 ಕೋಟಿ ವೀಕ್ಷಣೆ ಪಡೆದು ಅತೀ ಹೆಚ್ಚು ವೀಕ್ಷಣೆ ಪಡೆದ ಭಾರತದ ಮೊದಲ ವಿಡಿಯೋ ಎಂಬ ಖ್ಯಾತಿ ಗಳಿಸಿದೆ.
ಗುಲ್ಶನ್ ಕುಮಾರ್ ಅವರ ನಟನೆ ಇರುವ ‘ಶ್ರೀ ಹನುಮಾನ್ ಚಾಲೀಸಾ’ ವಿಡಿಯೋವನ್ನು 2011ರ ಮೇ 10 ರಂದು ಬಿಡುಗಡೆ ಮಾಡಲಾಯಿತು. 14 ವರ್ಷಗಳಲ್ಲಿ ಅದು 5,011,711,969 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿ ಮುನ್ನುಗ್ಗುತ್ತಿದೆ. ಗುಲ್ಷನ್ ಕುಮಾರ್ ಈಗಿಲ್ಲ. ಆದರೆ ಹರಿಹರನ್ ಅವರ ಗಾಯನ ಮತ್ತು ಲಲಿತ್ ಸೇನ್ ಅವರ ಸಂಯೋಜನೆ ಇದನ್ನು ಅಮರವಾಗಿಸಿದೆ.
ಭಾರತವನ್ನು ಮೀರಿ, ವಿಶ್ವಾದ್ಯಂತ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋಗಳ ಪಟ್ಟಿಯಲ್ಲಿ 16.38 ಬಿಲಿಯನ್ ವೀಕ್ಷಣೆಗಳೊಂದಿಗೆ “ಬೇಬಿ ಶಾರ್ಕ್ ಡ್ಯಾನ್ಸ್”, 8.85 ಬಿಲಿಯನ್ ವೀಕ್ಷಣೆಗಳೊಂದಿಗೆ “ಡೆಸ್ಪಾಸಿಟೊ”, 8.16 ಬಿಲಿಯನ್ ವೀಕ್ಷಣೆಗಳೊಂದಿಗೆ “ವೀಲ್ಸ್ ಆನ್ ದಿ ಬಸ್”, 7.28 ಬಿಲಿಯನ್ ವೀಕ್ಷಣೆಗಳೊಂದಿಗೆ “ಬಾತ್ ಸಾಂಗ್” ಮತ್ತು 7.12 ಬಿಲಿಯನ್ ವೀಕ್ಷಣೆಗಳೊಂದಿಗೆ “ಜಾನಿ ಜಾನಿ ಯೆಸ್ ಪಾಪಾ” ಸೇರಿವೆ. ಇದೀಗ “ಶ್ರೀ ಹನುಮಾನ್ ಚಾಲೀಸಾ” ಕೂಡ ಆಯ್ದ ಜಾಗತಿಕ ವಿಡಿಯೋಗಳ ಪಟ್ಟಿಗೆ ಸೇರಿದೆ.