ನವದೆಹಲಿ: ದೇಶದಲ್ಲಿ ಹಿಂದೂಗಳ ಸಂಖ್ಯೆಯಲ್ಲಿ ಕುಸಿತದ ವರದಿ ನಡುವೆ ಭಾರತದ ಸಾಮಾಜಿಕ ಸಾಮರಸ್ಯಕ್ಕೆ ಒಳನುಸುಳುವಿಕೆಗಿಂತ ಜನಸಂಖ್ಯೆ ಕುರಿತ ತಿರುಚುವಿಕೆಯು ( Demographic manipulation) ಇಂದು ದೊಡ್ಡ ಅಪಾಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಆರೋಪಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಮಾನೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿವಿಧತೆಯಲ್ಲಿ ಏಕತೆ ಭಾರತದ ಆತ್ಮವಾಗಿದೆ. ಒಂದು ವೇಳೆ ಈ ತತ್ವಕ್ಕೆ ಧಕ್ಕೆ ಉಂಟಾದರೆ ದೇಶದ ಶಕ್ತಿ ದುರ್ಬಲಗೊಳ್ಳುತ್ತದೆ ಎಂದರು.
ನುಸುಳುಕೋರರ ವಿರುದ್ಧ ಭಾರತೀಯ ನಾಗರಿಕರನ್ನು ರಕ್ಷಿಸಲು ಆಗಸ್ಟ್ 15ರ ಭಾಷಣದಲ್ಲಿ 'ಜನಸಂಖ್ಯಾ ಮಿಷನ್' ಘೋಷಿಸಿದ್ದನ್ನು ನೆನಪಿಸಿಕೊಂಡ ಪ್ರದಾನಿ, ಇಂದು ನಮ್ಮ ಏಕತೆ, ಸಂಸ್ಕೃತಿ ಮತ್ತು ಭದ್ರತೆ ಮೇಲೆ ನೇರವಾಗಿ ದಾಳಿ ಮಾಡುವ ಕೆಲಸಗಳು ನಡೆಯುತ್ತಿದೆ ಎಂದು ಹೇಳಿದರು.
ಆರ್‌ಎಸ್‌ಎಸ್ ನಿರಂತರವಾಗಿ ಸಾಮಾಜಿಕ ಸಾಮರಸ್ಯ, ವಂಚಿತರಿಗೆ ಆದ್ಯತೆ ನೀಡಿದೆ.ರಾಷ್ಟ್ರವು ಇಂದು ಪ್ರತ್ಯೇಕತಾವಾದಿ ಸಿದ್ಧಾಂತ, ಪ್ರಾದೇಶಿಕತೆಗಳಿಂದ ಹಿಡಿದು ಜಾತಿ, ಭಾಷೆಯ ವಿವಾದಗಳು ಮತ್ತು ಬಾಹ್ಯ ಶಕ್ತಿಗಳಿಂದ ಪ್ರಚೋದಿಸುವ ವಿಭಜಕಶಕ್ತಿಗಳವರೆಗೆ ತನ್ನ ಏಕತೆ, ಸಂಸ್ಕೃತಿ ಮತ್ತು ಭದ್ರತೆಯ ಸವಾಲುಗಳನ್ನು ಎದುರಿಸುತ್ತಿದೆ ಎಂದರು.
ವಿವಿಧತೆಯಲ್ಲಿ ಏಕತೆ ಭಾರತದ ಆತ್ಮವಾಗಿದೆ. ಈ ತತ್ವಕ್ಕೆ ಧಕ್ಕೆ ಉಂಟಾದರೆ ಭಾರತದ ಶಕ್ತಿ ಕುಗ್ಗುತ್ತದೆ. ಹೀಗಾಗಿ ಅಡಿಪಾಯದ ತತ್ವವನ್ನು ನಿರಂತರವಾಗಿ ಬಲಪಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.