ಮಿರ್ಜಾಪುರ: ಪ್ರಸಿದ್ಧ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಪಂಡಿತ್ ಛನ್ನುಲಾಲ್ ಮಿಶ್ರಾ ಅವರು ಗುರುವಾರ ವಿಧಿವಶರಾಗಿದ್ದಾರೆ.
ಪಂಡಿತ್ ಛನ್ನುಲಾಲ್ ಮಿಶ್ರಾ ಅವರಿಗೆ 89 ವರ್ಷದ ವಯಸ್ಸಾಗಿದ್ದು, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ಹಲವು ತಿಂಗಳುಗಳಿಂದ ವೈದ್ಯಕೀಯ ಆರೈಕೆಯಲ್ಲಿದ್ದರು. ಇಂದು ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ವಿಧಿವಶರಾಗಿದ್ದಾರೆ.
ನಿಧನ ಸುದ್ದಿಯನ್ನು ಪುತ್ರಿ ನಮ್ರತಾ ಮಿಶ್ರಾ ಅವರು ದೃಢಪಡಿಸಿದ್ದಾರೆ. ಮಾಧ್ಯಮಗಳಿಗೆ ದೂರವಾಣಿ ಮೂಲಕ ನಮ್ರತಾ ಅವರು ಸುದ್ದಿಯನ್ನು ದೃಢಪಡಿಸಿದ್ದಾರೆ.
ಮಿಶ್ರಾ ಅವರ ಪಾರ್ಥೀವ ಶರೀರವನ್ನು ಮಧ್ಯಾಹ್ನದ ನಂತರ ಮಿರ್ಜಾಪುರದಿಂದ ವಾರಣಾಸಿಗೆ ತರಲಾಗುವುದು. ಅಂತ್ಯಕ್ರಿಯೆ ಸ್ಥಳಗಳಲ್ಲಿ ಒಂದಾದ ಮಣಿಕರ್ಣಿಕಾ ಘಾಟ್‌ನಲ್ಲಿ ಇಂದು ರಾತ್ರಿ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ತಿಳಿದುಬಂದಿದೆ.
ಪಂಡಿತ್ ಛನ್ನುಲಾಲ್ ಮಿಶ್ರಾ ಅವರನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಪ್ರತಿಪಾದಕರಲ್ಲಿ ಒಬ್ಬರು ಮತ್ತು ಬನಾರಸ್ ಘರಾನಾ ಸಂಪ್ರದಾಯದ ಪಾಲಕರು ಎಂದು ಪರಿಗಣಿಸಲಾಗಿದೆ.
ಖಯಾಲ್, ಠುಮ್ರಿ ಮತ್ತು ಭಜನೆಗಳ ಭಾವಪೂರ್ಣ ಪ್ರದರ್ಶನಗಳಿಗೆ ಹೆಸರುವಾಸಿಯಾದ ಮಿಶ್ರಾ ಅವರ ಕಲಾತ್ಮಕತೆಯು ಪೀಳಿಗೆಯಿಂದ ಪೀಳಿಗೆಗೆ ಭಾರತೀಯ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಒಯ್ಯಿತು. ಅವರ ಪ್ರದರ್ಶನಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರೇಕ್ಷಕರ ಮೇಲೆ ಅಳಿಸಲಾಗದ ಛಾಪನ್ನು ಮೂಡಿಸಿವೆ.
ಮೋದಿ ಸಂತಾಪ
ಈ ನಡುವೆ ಪಂಡಿತ್ ಛನ್ನುಲಾಲ್ ಮಿಶ್ರಾ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಖ್ಯಾತ ಶಾಸ್ತ್ರೀಯ ಗಾಯಕ ಪಂಡಿತ್ ಛನ್ನುಲಾಲ್ ಮಿಶ್ರಾ ಅವರ ನಿಧನದಿಂದ ನನಗೆ ತೀವ್ರ ದುಃಖವಾಗಿದೆ. ಅವರು ಭಾರತೀಯ ಕಲೆ ಮತ್ತು ಸಂಸ್ಕೃತಿಯ ಸಮೃದ್ಧಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಶಾಸ್ತ್ರೀಯ ಸಂಗೀತವನ್ನು ಜನಸಾಮಾನ್ಯರಿಗೆ ತಂದಿದ್ದಲ್ಲದೆ, ವಿಶ್ವ ವೇದಿಕೆಯಲ್ಲಿ ಭಾರತೀಯ ಸಂಪ್ರದಾಯಗಳನ್ನು ಸ್ಥಾಪಿಸಲು ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ.
ಅವರ ಪ್ರೀತಿ ಮತ್ತು ಆಶೀರ್ವಾದಗಳನ್ನು ಯಾವಾಗಲೂ ಪಡೆದಿರುವುದು ನನ್ನ ಅದೃಷ್ಟ. 2014 ರಲ್ಲಿ ವಾರಣಾಸಿಯಿಂದ ಸ್ಪರ್ಧಿಸಲು ನನ್ನ ಹೆಸರನ್ನು ಪ್ರಸ್ತಾಪಿಸಿದ್ದರು. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಓಂ ಶಾಂತಿ ಎಂದು ಹೇಳಿದ್ದಾರೆ.