ನವದೆಹಲಿ: 'ಭೌಗೋಳಿಕವಾಗಿ ಪಾಕಿಸ್ತಾನ ತನ್ನ ಸ್ಥಾನ ಮತ್ತು ಅಸ್ಥಿತ್ವವನ್ನು ಉಳಿಸಿಕೊಳ್ಳಲು ಬಯಸಿದರೆ ಅದು ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಭೌಗೋಳಿಕ ನಕ್ಷೆಯಲ್ಲಿ ಕೂಡ ಇರದಂತೆ ಅಳಿಸಿ ಹಾಕಿ ಬಿಡುತ್ತೇವೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಎಚ್ಚರಿಕೆ ನೀಡಿದ್ದಾರೆ.
ರಾಜಸ್ಥಾನದ ಅನುಪ್‌ಗಢದಲ್ಲಿರುವ ಸೇನಾ ಪೋಸ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, 'ಭಯೋತ್ಪಾದನೆ ಬೆಂಬಲಿಸುವುದನ್ನು ನಿಲ್ಲಿಸಿ.. ಇಲ್ಲವಾದಲ್ಲಿ ನಿಮ್ಮ ಭೌಗೋಳಿಕ ಉಪಸ್ಥಿತಿಯನ್ನು ಕಳೆದುಕೊಳ್ಳುತ್ತೀರಿ. ಪಾಕಿಸ್ತಾನವು ನಕ್ಷೆಯಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಬಯಸಿದರೆ, ಅದು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಪಾಕಿಸ್ತಾನವನ್ನು ಭೂಪಟದಿಂದಲೇ ಅಳಿಸಿಹಾಕಿ ಬಿಡುತ್ತೇವೆ ಎಂದು ಹೇಳಿದರು.
ಭಯೋತ್ಪಾದಕ ನಾಯಕರ ಬೆಂಬಲಕ್ಕೆ ಹೆಸರುವಾಸಿಯಾದ ಪಶ್ಚಿಮ ನೆರೆಯ ರಾಷ್ಟ್ರ ಪಾಕಿಸ್ತಾನ ತನ್ನ ನಿಲುವನ್ನು ಬದಲಿಸಿಕೊಳ್ಳಬೇಕು. ಈ ಬಾರಿ ಭಾರತೀಯ ಪಡೆಗಳು ಯಾವುದೇ ಸಂಯಮವನ್ನು ತೋರಿಸುವುದಿಲ್ಲ. ಪಾಕಿಸ್ತಾನ ಭಯೋತ್ಪಾದನೆಯನ್ನು ರಫ್ತು ಮಾಡುವುದನ್ನು ನಿಲ್ಲಿಸಲು ನಿರಾಕರಿಸಿದರೆ 'ಆಪರೇಷನ್ ಸಿಂಧೂರ್' ನ ಎರಡನೇ ಆವೃತ್ತಿಯು ದೂರವಿಲ್ಲ ಎಂದು ದ್ವಿವೇದಿ ಎಚ್ಚರಿಸಿದರು.
"ಈ ಬಾರಿ ನಾವು ಆಪರೇಷನ್ ಸಿಂಧೂರ್ 1.0 ರಲ್ಲಿ ಹೊಂದಿದ್ದ ಸಂಯಮವನ್ನು ಕಾಯ್ದುಕೊಳ್ಳುವುದಿಲ್ಲ. ಈ ಬಾರಿ ಪಾಕಿಸ್ತಾನ ಭೌಗೋಳಿಕವಾಗಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಬಯಸುತ್ತೀರೋ ಇಲ್ಲವೋ ಎಂದು ಯೋಚಿಸುವಂತೆ ಮಾಡುವಂತಹದ್ದನ್ನು ನಾವು ಮಾಡುತ್ತೇವೆ. ಪಾಕಿಸ್ತಾನ ಭೌಗೋಳಿಕವಾಗಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಬಯಸಿದರೆ, ಅದು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸಬೇಕು. ದೇವರು ಬಯಸಿದರೆ, ನಿಮಗೆ ಶೀಘ್ರದಲ್ಲೇ ಅವಕಾಶ ಸಿಗುತ್ತದೆ. ಶುಭವಾಗಲಿ. ಎಂದು ಹೇಳುವ ಮೂಲಕ ದ್ವಿವೇದಿ ಸೈನಿಕರಿಗೆ ಯಾವುದೇ ಪರಿಸ್ಥಿತಿಗೂ ಸಿದ್ಧರಾಗಿರುವಂತೆ ಸೇನಾ ಮುಖ್ಯಸ್ಥರು ತಿಳಿಸಿದರು.
ಒಂದು 'ದೊಡ್ಡ ಹಕ್ಕಿ' ಸೇರಿ ಪಾಕಿಸ್ತಾನದ 6 ಯುದ್ದ ವಿಮಾನಗಳು ಪತನ
ಇದೇ ವೇಳೆ ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಪಡೆಗಳು ಅಮೆರಿಕ ನಿರ್ಮಿತ ಎಫ್ -16 ಮತ್ತು ಚೀನಾದ ಜೆಎಫ್ -17 ಸೇರಿದಂತೆ ನಾಲ್ಕರಿಂದ ಆರು ಪಾಕಿಸ್ತಾನಿ ಯುದ್ಧ ವಿಮಾನಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿವೆ. ಈ ಪೈಕಿ ಐದು ಫೈಟರ್ ಜೆಟ್‌ಗಳು ಮತ್ತು ಒಂದು 'ದೊಡ್ಡ ಹಕ್ಕಿ'ಯನ್ನು, ಬಹುಶಃ ವಾಯುಗಾಮಿ ಮುಂಚಿನ ಎಚ್ಚರಿಕೆ ಮತ್ತು ನಿಯಂತ್ರಣ ವಿಮಾನ ಹೊಡೆದುರುಳಿಸಲಾಗಿದೆ ಎಂದು ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು ಹೇಳಿದ್ದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸೂಕ್ತ ಪ್ರತ್ಯುತ್ತರ ನೀಡಲು ಭಾರತ ಈ ಬೃಹತ್ ಮಿಲಿಟರಿ ಕಾರ್ಯಾಚರಣೆಯನ್ನು ಕೈಗೊಂಡಿತು. ಮೇ 7 ರಂದು ಭಾರತೀಯ ಪಡೆಗಳು ದೀರ್ಘ-ಶ್ರೇಣಿಯ ನಿಖರ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಪಾಕಿಸ್ತಾನ ಮತ್ತು ಪಿಒಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) ದಲ್ಲಿ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿತ್ತು.
ಭಯೋತ್ಪಾದನಾ ಶಿಬಿರಗಳ ಮೇಲಿನ ದಾಳಿಯು ಎರಡೂ ದೇಶಗಳನ್ನು ಯುದ್ಧದ ಸಮೀಪಕ್ಕೆ ತಂದಿತು. ಪಾಕಿಸ್ತಾನದ ಕಮಾಂಡರ್‌ಗಳು ಕದನ ವಿರಾಮ ಘೋಷಿಸುವಂತೆ ಭಾರತೀಯ ಸೇನಾಧಿಕಾರಿಗಳಿಗೆ ಮನವಿ ಮಾಡಿದ ನಂತರ ಮೇ 10 ರಂದು ಕದನ ವಿರಾಮವನ್ನು ಜಾರಿಗೆ ತರಲಾಗಿತ್ತು.